ADVERTISEMENT

ಪ್ರವಾಸಿ ತಾಣ ಬನವಾಸಿಯಲ್ಲಿ ಸೌಕರ್ಯಗಳ ಕೊರತೆ

ತಾಲ್ಲೂಕಿಗಾಗಿ ‘ಪಂಪ ನಾಡು’ ಪ್ರಯತ್ನ

ಗಣಪತಿ ಹೆಗಡೆ
Published 16 ಆಗಸ್ಟ್ 2022, 23:30 IST
Last Updated 16 ಆಗಸ್ಟ್ 2022, 23:30 IST
ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಬನವಾಸಿಯ ಉಮಾಮಧುಕೇಶ್ವರ ದೇವಸ್ಥಾನ
ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಬನವಾಸಿಯ ಉಮಾಮಧುಕೇಶ್ವರ ದೇವಸ್ಥಾನ   

ಶಿರಸಿ: ರಾಜ್ಯದ ಐತಿಹಾಸಿಕ ಕ್ಷೇತ್ರದಲ್ಲಿ ಒಂದೆನಿಸಿರುವ ಬನವಾಸಿ ಗಮನಸೆಳೆಯುವ ಪ್ರವಾಸಿ ತಾಣವಾಗಿದ್ದರೂ ಸೌಕರ್ಯಗಳ ಕೊರತೆಯಿಂದ ಸೊರಗಿದೆ. ಅಭಿವೃದ್ಧಿ ಚಟುವಟಿಕೆ ವೇಗ ಪಡೆದುಕೊಂಡಿದ್ದರ ನಡುವೆಯೂ ಹಲವು ಸಮಸ್ಯೆಗಳು ಇಲ್ಲಿ ಜೀವಂತವಾಗಿವೆ.

ಶಿರಸಿ ತಾಲ್ಲೂಕಿನಲ್ಲಿರುವ ಬನವಾಸಿ ಗ್ರಾಮ ಪಂಚಾಯ್ತಿ ಯಲ್ಲಾಪುರ–ಮುಂಡಗೋಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ. ಬನವಾಸಿ ಮತ್ತು ಕಡಗೋಡ ಎಂಬ ಎರಡು ಗ್ರಾಮವಿರುವ ಬನವಾಸಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನಸಂಖ್ಯೆ 8,500 ರಷ್ಟಿದೆ.

ಪ್ರವಾಸಿ ಕೇಂದ್ರ, ಜನದಟ್ಟಣೆ ಹೊಂದಿರುವ ಬನವಾಸಿಯನ್ನು ಆಡಳಿತ ಸುಗಮವಾಗಿಸುವ ದೃಷ್ಟಿಯಿಂದ ಪ್ರತ್ಯೇಕ ತಾಲ್ಲೂಕಾಗಿ ರಚಿಸಬೇಕು ಎಂಬ ಒತ್ತಾಯ ಕಳೆದ ಹಲವು ವರ್ಷದಿಂದ ಕೇಳಿಬರುತ್ತಲೇ ಇದೆ. ಇದಕ್ಕಾಗಿ ಹೋರಾಟವೂ ನಡೆದಿದೆ. ಕನ್ನಡದ ಮೊದಲ ರಾಜವಂಶ ಕದಂಬರ ರಾಜಧಾನಿ ಇದಾಗಿತ್ತು ಎಂಬ ಇತಿಹಾಸವಿದೆ. ಪ್ರಸಿದ್ಧ ಉಮಾಮಧುಕೇಶ್ವರ ದೇವಸ್ಥಾನ ಸೇರಿದಂತೆ ಕದಂಬರ ಕಾಲದ ಶಾಸನ, ಕಲಾಕೃತಿಗಳು ಇಲ್ಲಿರುವುದು ಪ್ರವಾಸಿಗರನ್ನು ಸೆಳೆಯುತ್ತಿದೆ.

ADVERTISEMENT

‘ಪ್ರವಾಸಿಗರ ಅನುಕೂಲತೆಗೆ ಸೂಕ್ತ ಸೌಕರ್ಯಗಳಿಲ್ಲ. ಮಾರ್ಗದರ್ಶಿಗಳ ಕೊರತೆ, ಸ್ನಾನಗೃಹ, ತಂಗಲು ಸುಸಜ್ಜಿತ ಯಾತ್ರಿ ನಿವಾಸಗಳಿಲ್ಲ. ಸಂಜೆಯ ಬಳಿಕ ಶಿರಸಿ, ಸೊರಬಕ್ಕೆ ಬಸ್ ಸೌಕರ್ಯವೂ ಇಲ್ಲ’ ಎಂದು ಸಮಸ್ಯೆ ವಿವರಿಸುತ್ತಾರೆ ಸಾಮಾಜಿಕ ಕಾರ್ಯಕರ್ತ ಬಿ.ಶಿವಾಜಿ.

‘ಬೇಸಿಗೆಯಲ್ಲಿ ಕಡಗೋಡ, ಬನವಾಸಿಯ ಕೆಲ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ವಿದ್ಯುತ್ ಸಂಪರ್ಕದಲ್ಲಿ ಅಡೆತಡೆಗಳು ಸಾಮಾನ್ಯವಾಗಿವೆ. ಪುರಾತತ್ವ ಇಲಾಖೆ ಸುಪರ್ದಿಯಲ್ಲಿರುವ ದೇವಾಲಯದ 300 ಮೀ. ವ್ಯಾಪ್ತಿಯಲ್ಲಿ ಮನೆಗಳ ದುರಸ್ತಿ, ನಿರ್ಮಾಣಕ್ಕೆ ಪರವಾನಗಿ ಪಡೆಯುವುದೇ ಸವಾಲಾಗುತ್ತಿದೆ. ಜತೆಗೆ ಕದಂಬೋತ್ಸವ ನಡೆಯುವ ವೇದಿಕೆ, ದೇವಸ್ಥಾನದ ನಿರ್ವಹಣೆಯಲ್ಲೂ ನಿರ್ಲಕ್ಷ್ಯ ಕಾಣುತ್ತಿದೆ’ ಎಂಬುದು ಸ್ಥಳೀಯ ನಿವಾಸಿ ಚಂದ್ರಶೇಖರ ಅವರ ದೂರು.

‘ಬನವಾಸಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ತಾಣವಾಗಿರುವ ಜತೆಗೆ, ಆಡಳಿತ ಕೇಂದ್ರವಾಗವ ಸಾಮರ್ಥ್ಯವನ್ನೂ ಹೊಂದಿದೆ. ಇಲ್ಲಿನ ಜನರು ಕಚೇರಿ ಕೆಲಸಕ್ಕೆ ದೂರದ ಶಿರಸಿಗೆ ಅಲೆಯುವ ಬದಲು ಬನವಾಸಿಯನ್ನೇ ತಾಲ್ಲೂಕಾಗಿ ರಚಿಸಿದರೆ ಆಡಳಿತಕ್ಕೂ ಅನುಕೂಲವಾಗಲಿದೆ’ ಎಂಬ ಆಗ್ರಹ ಮುಂದಿಡುತ್ತಾರೆ ಬನವಾಸಿ ತಾಲ್ಲೂಕು ರಚನೆ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಉದಯಕುಮಾರ್ ಕಾನಳ್ಳಿ.

ಆಸ್ಪತ್ರೆ ಮೇಲ್ದರ್ಜೆಗೇರಿಸಿ:

‘ಬನವಾಸಿಯಲ್ಲಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿರುವಷ್ಟು ಜನಸಂಖ್ಯೆ ಇದೆ. ಇಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರು, ಸಿಬ್ಬಂದಿ ಕೊರತೆ ಇದೆ. ಈ ಕೇಂದ್ರವನ್ನು ಮೇಲ್ದರ್ಜೆಗೇರಿಸಿ, ತಜ್ಞ ವೈದ್ಯರನ್ನು ನೇಮಿಸಬೇಕು. ದಿನದ 24 ತಾಸು ಕಾರ್ಯನಿರ್ವಹಿಸುವಂತೆ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ’ ಎಂಬ ಆಗ್ರಹ ಮುಂದಿಟ್ಟಿದ್ದಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ತುಳಸಿ ಆರೇರ.

‘ಬಂಡೇರಕೊಟ್ಟಿಗೆ, ಹೊಸಕಟ್ಟೆ ಏರಿ ಮಜರೆಗಳ ವ್ಯಾಪ್ತಿಯ ಸುಮಾರು 50 ಮನೆಗಳ ಮತದಾರರ ಪಟ್ಟಿ ಬನವಾಸಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿದೆ. ಈ ಗ್ರಾಮಗಳು ಗುಡ್ನಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿಕೊಂಡಿದೆ. ಇದರಿಂದ ಸೌಕರ್ಯಗಳ ಕೊರತೆ ಸಮಸ್ಯೆ ಎದುರಾಗಿದ್ದು, ಈ ಎರಡೂ ಮಜರೆಯನ್ನು ಬನವಾಸಿ ಗ್ರಾಮ ಪಂಚಾಯ್ತಿಗೆ ಸೇರಿಸುವ ಪ್ರಯತ್ನ ನಡೆದಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.