ಶಿರೂರು: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿ ಅಂಚಿನ ಗುಡ್ಡಗಳ ಬಗ್ಗೆ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದಿಂದ ಸರ್ವೆ ನಡೆಸಿ, ಸುರಕ್ಷತಾ ಕ್ರಮಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಇಲ್ಲಿನ ಗುಡ್ಡ ಕುಸಿತದಿಂದ ಅವಘಡ ಸಂಭವಿಸಿದ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ಅವರು ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಿ, ಬಳಿಕ ಮಾಧ್ಯಮದವರೊಡನೆ ಮಾತನಾಡಿದರು.
'ಗುಡ್ಡ ಕುಸಿದ ಸ್ಥಳ ಮತ್ತು ಅಕ್ಕಪಕ್ಕದಲ್ಲಿರುವ ಗುಡ್ಡ ಕೆಸರು ರೂಪದಲ್ಲಿದೆ. ಉಳಿದ ಗುಡ್ಡವೂ ಕುಸಿಯುವ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಸುರಕ್ಷತಾ ಕ್ರಮದೊಂದಿಗೆ ಮಣ್ಣು ತೆರವು ಕಾರ್ಯ ನಡೆದಿದೆ' ಎಂದರು.
'ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ನೆಲೆ ಕಲ್ಪಿಸುವ ಬಗ್ಗೆ ಯೋಚಿಸಲಾಗುವುದು. ಈಗಾಗಲೇ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ' ಎಂದರು.
'ರಾಜ್ಯ ಸರ್ಕಾರದಿಂದ ಈಗಾಗಲೇ ಸಾಧ್ಯವಾದಷ್ಟು ಪರಿಹಾರ ನೀಡಲಾಗಿದೆ. ಇನ್ನೂ ಹೆಚ್ಚಿನ ಪರಿಹಾರ ಕೊಡಿಸಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಯತ್ನಿಸಲಿ' ಎನ್ನುವ ಮೂಲಕ 'ರಾಜ್ಯ ಸರ್ಕಾರ ಸಂತ್ರಸ್ತರಿಗೆ ಇನ್ನಷ್ಟು ಪರಿಹಾರ ಒದಗಿಸಲಿ' ಎಂಬ ಆಗ್ರಹಕ್ಕೆ ತಿರುಗೇಟು ನೀಡಿದರು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಶಾಸಕ ಸತೀಶ ಸೈಲ್, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.