ADVERTISEMENT

ಕಾರವಾರ: ‘ವಿಜಯ ದಿವಸ’ ಆಚರಣೆಗೆ ಸಮಿತಿ ರಚನೆ

ನಂದವಾಳದಲ್ಲಿ ಧ್ವಜಾರೋಹಣ ನೆರವೇರಿಸಿದ ಶಾಸಕಿ ರೂಪಾಲಿ ನಾಯ್ಕ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 14:08 IST
Last Updated 26 ಫೆಬ್ರುವರಿ 2021, 14:08 IST
ಕಾರವಾರ ತಾಲ್ಲೂಕಿನ ನಂದವಾಳದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ‘ವಿಜಯ ದಿವಸ’ ಕಾರ್ಯಕ್ರಮದಲ್ಲಿ ಶಾಸಕಿ ರೂಪಾಲಿ ನಾಯ್ಕ ಧ್ವಜಾರೋಹಣ ನೆರವೇರಿಸಿದರು
ಕಾರವಾರ ತಾಲ್ಲೂಕಿನ ನಂದವಾಳದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ‘ವಿಜಯ ದಿವಸ’ ಕಾರ್ಯಕ್ರಮದಲ್ಲಿ ಶಾಸಕಿ ರೂಪಾಲಿ ನಾಯ್ಕ ಧ್ವಜಾರೋಹಣ ನೆರವೇರಿಸಿದರು   

ಕಾರವಾರ: ‘ಸೋಂದೆ ಅರಸ ಸದಾಶಿವ ರಾಯ ಅವರು ಬ್ರಿಟಿಷರ ವಿರುದ್ಧ ಗಡಿಭಾಗ ಕಾರವಾರದಲ್ಲಿ ಹೋರಾಡಿದ್ದನ್ನು ಅರಿತಾಗ ರೋಮಾಂಚನವಾಗುತ್ತದೆ. ಪ್ರತಿವರ್ಷ ಫೆ.26ರಂದು ಅವರನ್ನು ಸ್ಮರಿಸಿ ವಿಜಯ ದಿವಸ ಹಮ್ಮಿಕೊಳ್ಳಲು ಸಮಿತಿಯೊಂದನ್ನು ರಚಿಸಲಾಗುವುದು’ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದರು.

ತಾಲ್ಲೂಕಿನ ಕಡವಾಡ ಗ್ರಾಮದ ನಂದವಾಳದಲ್ಲಿ ಶುಕ್ರವಾರ ಆಯೋಜಿಸಲಾದ ‘ವಿಜಯ ದಿವಸ’ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.

‘ಈ ನೆಲದಲ್ಲಿ ಬ್ರಿಟಿಷರ ಧ್ವಜವನ್ನು ಕೆಳಗಿಳಿಸಿ ಅವರನ್ನು ಹಿಮ್ಮೆಟ್ಟಿಸಿದ ಬಗ್ಗೆ ಇತಿಹಾಸದ ಪುಟದಲ್ಲಿ ಇರುವ ಅಂಶಗಳ ಮಹತ್ವನ್ನು ಅರಿಯಬೇಕು. ಎಲ್ಲರೂ ದೇಶದ ಬಗ್ಗೆ ಅಭಿಮಾನ ಬೆಳೆಸಿಕೊಂಡು ಪಕ್ಷಾತೀತವಾಗಿ ಇಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ‘ಬ್ರಿಟಿಷರು ರೂಪಿಸಿದ ಮೆಕಾಲೆ ಶಿಕ್ಷಣ ನೀತಿಯಲ್ಲಿ ಅವರ ಇತಿಹಾಸಕ್ಕೆ ಪೂರಕವಾದ ಅಂಶಗಳಷ್ಟೇ ಇದ್ದವು. ಆಗಿನಿಂದ ಆಗಿರುವ ತಪ್ಪನ್ನು ತಿದ್ದಲು ಇಂಥ ಸಂದರ್ಭಗಳು ಅವಕಾಶಗಳಾಗಿವೆ. ರಾಜ್ಯದ ಪಠ್ಯದಲ್ಲಿ ಸದಾಶಿವ ರಾಯರ ಬಗ್ಗೆ ಪಾಠ ಇರುವುದು ಅಗತ್ಯವಾಗಿದೆ’ ಎಂದರು.

ಪಕ್ಷದ ವಕ್ತಾರ ನಾಗರಾಜ ನಾಯಕ ಮಾತನಾಡಿ, ‘ಉತ್ತರ ಕನ್ನಡದ ಇತಿಹಾಸದ ಬಗ್ಗೆ ಇನ್ನೂ ಸ್ಪಷ್ಟವಾದ ಸಂಶೋಧನೆಗಳಾಗಿಲ್ಲ. ದೇಶಾಭಿಮಾನ ಹೆಚ್ಚಿಸುವ ಈ ಮಾದರಿಯ ಕಾರ್ಯಕ್ರಮಗಳು ಆಗಾಗ ಜಿಲ್ಲೆಯಾದ್ಯಂತ ಆಯೋಜನೆ ಆಗಬೇಕು’ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮೊದಲು ಕಾರವಾರ ನಗರಸಭೆ ಕಚೇರಿಯಿಂದ ಹೊರಟ ಬೈಕ್ ರ‍್ಯಾಲಿಯು ನಂದವಾಳಕ್ಕೆ ತಲುಪಿತು. 1725ರ ಫೆ.26ರಂದು ಸೋಂದೆ ಅರಸ ಸದಾಶಿವ ರಾಯ ಬ್ರಿಟಿಷರ ವಿರುದ್ಧ ಹೋರಾಡಿ ಸೋಲಿಸಿದ ನೆನಪಿನಲ್ಲಿ ಇಲ್ಲಿ ‘ವಿಜಯ ದಿವಸ’ ಹಮ್ಮಿಕೊಳ್ಳಲಾಗುತ್ತಿದೆ.

ಸಾಧಕರಿಗೆ ಸನ್ಮಾನ:ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾರವಾರದ ಕಲ್ಪನಾ ರಶ್ಮಿ ಕಲಾಲೋಕದ ಸಂಗೀತ ಶಿಕ್ಷಕ ಕೃಷ್ಣಾನಂದ.ಜಿ ಗುರವ, ಶಿಲ್ಪಿ ನಂದಾ ಆಚಾರಿ, ರಕ್ತದಾನಿ ಶಿವಾನಂದ ಶಾನಭಾಗ, ನಿವೃತ್ತ ಯೋಧ ವಿಠೋಬ ವಿಶ್ವನಾಥ ನಾಯಕ, ದಿವಂಗತ ಸೈನಿಕ ವಿನೋದ ಮಹಾದೇವ ನಾಯ್ಕ ಅವರ ತಂದೆ ಮಹಾದೇವ ನಾಯ್ಕ, ಹಾಗೂ ಹಿರಿಯ ಸಹಕಾರಿಯೂ ಆಗಿರುವ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರವೀಂದ್ರ ಪವಾರ್ ಸನ್ಮಾನ ಸ್ವೀಕರಿಸಿದರು.

ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ಪಿ.ನಾಯ್ಕ, ಕಾರ್ಯಕ್ರಮ ಹಮ್ಮಿಕೊಳ್ಳಲು ಸ್ಥಳ ದಾನ ನೀಡಿದ ಸುಧಾಕರ ನಾಯ್ಕ, ಕಡವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಿಯಾ ಗೌಡ, ಉಪಾಧ್ಯಕ್ಷ ಆನಂದು ನಾಯ್ಕ, ಪ್ರಮುಖರಾದ ನಾಗೇಶ ಕುರ್ಡೇಕರ, ರಾಜೇಂದ್ರ ನಾಯ್ಕ, ಎನ್.ಎಸ್ ಹೆಗಡೆ, ಗೋವಿಂದ ನಾಯ್ಕ ಮುಂತಾದವರಿದ್ದರು. ದೀಪ್ತಿ ಅರ್ಗೇಕರ್ ಪ್ರಾರ್ಥಿಸಿದರು. ‍ಸುಭಾಶ್ ಗುನಗಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.