ADVERTISEMENT

ನೀರಿನ ಬುಗ್ಗೆಗಳ ಪುನಶ್ಚೇತನ; ದಕ್ಷಿಣ ಭಾರತದಲ್ಲೇ ಮೊದಲಿಗೆ ಶಿರಸಿಯಲ್ಲಿ ಯೋಜನೆ

ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಶಿರಸಿ ತಾಲ್ಲೂಕಿನಲ್ಲಿ ಯೋಜನೆ ಜಾರಿ

ಗಣಪತಿ ಹೆಗಡೆ
Published 14 ಮಾರ್ಚ್ 2021, 21:45 IST
Last Updated 14 ಮಾರ್ಚ್ 2021, 21:45 IST
ಹುಲೇಕಲ್ ಗ್ರಾಮದಲ್ಲಿ ನೀರಿನ ಬುಗ್ಗೆ ಪುನಶ್ಚೇತನಗೊಳಿಸುವ ಯೋಜನೆಗೆ ಚಾಲನೆ ನೀಡಲಾಯಿತು
ಹುಲೇಕಲ್ ಗ್ರಾಮದಲ್ಲಿ ನೀರಿನ ಬುಗ್ಗೆ ಪುನಶ್ಚೇತನಗೊಳಿಸುವ ಯೋಜನೆಗೆ ಚಾಲನೆ ನೀಡಲಾಯಿತು   

ಶಿರಸಿ: ಸ್ವಾಭಾವಿಕ ನೀರಿನ ಬುಗ್ಗೆಗಳಿಗೆ ಪುನಶ್ಚೇತನ ನೀಡಿ ವರ್ಷಪೂರ್ತಿ ನೀರು ಹರಿಯುವಂತೆ ಮಾಡಲು ನಬಾರ್ಡ್ ದಕ್ಷಿಣ ಭಾರತದಲ್ಲೇ ಮೊದಲ ಪ್ರಾಯೋಗಿಕ ಯೋಜನೆಯನ್ನು ಶಿರಸಿ ತಾಲ್ಲೂಕಿನ ಹುಲೇಕಲ್, ದೇವನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೈಗೊಂಡಿದೆ.

ಹುಲೇಕಲ್, ನೆಕ್ಷೆ, ಕೋಡಿಗಾರ, ಬಕ್ಕಳ, ಹಾರೇಹುಲೇಕಲ್, ಸರಗೊಪ್ಪ, ದೇವನಳ್ಳಿಯಲ್ಲಿ ಸ್ವಾಭಾವಿಕ ನೀರಿನ ಬುಗ್ಗೆಗಳನ್ನು ಗುರುತಿಸಿದ್ದು, ಅವುಗಳಿಗೆ ಆಧಾರವಾಗಿರುವ ದೊಡ್ಡ ಪ್ರಮಾಣದ ನೀರಿನ ಮೂಲದಲ್ಲಿ ನೀರಿನ ಪ್ರಮಾಣ ಹೆಚ್ಚಿಸಲಾಗುತ್ತದೆ. ಇದರ ಸುತ್ತಲಿನ 481 ಹೆಕ್ಟೇರ್ ಪ್ರದೇಶದಲ್ಲಿ ಪೂರಕ ಚಟುವಟಿಕೆ ನಡೆಸಲು ನಿರ್ಧರಿಸಲಾಗಿದೆ.

ಭಾರತೀಯ ಅಗ್ರೋ ರಿಸರ್ಚ್ ಫೌಂಡೇಷನ್ (ಬೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆ) ಸಹಯೋಗದಲ್ಲಿ ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಬುಗ್ಗೆಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ನಬಾರ್ಡ್ ಹೊಂದಿದೆ.

ADVERTISEMENT

‘ಈಚಿನ ವರ್ಷಗಳಲ್ಲಿ ಮಳೆ ಕಡಿಮೆಯಾಗಿದ್ದು, ನೀರಿನ ಬಳಕೆ ಪ್ರಮಾಣ ಅಧಿಕವಾಗಿದೆ. ಹೀಗಾಗಿ, ಸ್ವಾಭಾವಿಕ ಜಲಮೂಲಗಳು ಫೆಬ್ರುವರಿ ವೇಳೆಗೆ ಬರಿದಾಗುತ್ತಿವೆ. ಅದನ್ನು ವರ್ಷ ಪೂರ್ತಿ ಹರಿಯುವಂತೆ ಮಾಡಲು ಅಗತ್ಯ ರೂಪುರೇಷೆ ಸಿದ್ಧಪಡಿಸಲಾಗಿದೆ’ ಎನ್ನುತ್ತಾರೆ ಬೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಿಲ್ಲಾ ಘಟಕದ ಸಂಯೋಜಕ ಎಂ.ಎನ್.ಹೆಗಡೆ.

‘ಬುಗ್ಗೆಗಳ ನೀರಿನ ಮೂಲವನ್ನು ಭೂಗರ್ಭ ಶಾಸ್ತ್ರಜ್ಞರು ಪತ್ತೆ ಹಚ್ಚುತ್ತಾರೆ. ಬಳಿಕ ಅದರ ಸುತ್ತಲಿನ ಪ್ರದೇಶದಲ್ಲಿ ನೀರು ಇಂಗಿಸಲು ಇಂಗುಗುಂಡಿ ನಿರ್ಮಾಣವಾಗಲಿದೆ. ನೀರು ಇಂಗಿಸಬಲ್ಲ ಗಿಡಗಳನ್ನು ನೆಡಲಾಗುವುದು, ಸಣ್ಣ ಚೆಕ್‍ಡ್ಯಾಂಗಳನ್ನು ನಿರ್ಮಿಸಲಾಗುತ್ತದೆ’ ಎಂದು ವಿವರಿಸಿದರು.

‘ಸಿಕ್ಕಿಂ ರಾಜ್ಯದಲ್ಲಿ ಮಾತ್ರ ಈ ಮಾದರಿಯ ಯೋಜನೆ ಕೈಗೊಳ್ಳಲಾಗಿತ್ತು. ಕೇರಳ, ಚಿಕ್ಕಮಗಳೂರಿನ ಕೊಪ್ಪ ಗ್ರಾಮದಲ್ಲೂ ಪ್ರಾಯೋಗಿಕ ಯೋಜನೆ ಅನುಷ್ಠಾನಕ್ಕೆ ಚಿಂತನೆ ನಡೆದಿದೆ. ಆದರೆ, ಮೊದಲಿಗೆ ಹುಲೇಕಲ್‍ನಲ್ಲಿ ಮಾತ್ರ ಅನುಷ್ಠಾನಗೊಳಿಸಲಾಗು
ತ್ತಿದೆ’ ಎಂದು ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ರೇಜಿಸ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯೋಜನೆಗೆ ತಗಲುವ ವೆಚ್ಚದಲ್ಲಿ ಶೇ.84ರಷ್ಟು ನಬಾರ್ಡ್ ಭರಿಸುತ್ತದೆ. ಉಳಿದ ಶೇ 16ರಷ್ಟನ್ನು ಸ್ಥಳೀಯರಿಂದ ಮಾನವ ಶ್ರಮ ಅಥವಾ ವಂತಿಗೆ ರೂಪದಲ್ಲಿ ಸಂಗ್ರಹಿಸಲಾಗುತ್ತದೆ’ ಎಂದು ಹೇಳಿದರು.

ಕಲ್ಯಾಣಿ ಹೂಳೆತ್ತುವಿಕೆ ಯಶಸ್ಸು

‘ನಬಾರ್ಡ್ ಜಲಮೂಲಗಳ ಅಭಿವೃದ್ಧಿಪಡಿಸುವ ಯೋಜನೆಗೂ ಮೊದಲು ಆಯಾ ಗ್ರಾಮಗಳಲ್ಲಿ ಅದಕ್ಕೆ ಪೂರಕವಾದ ಪ್ರಾಯೋಗಿಕ ಅಧ್ಯಯನ ನಡೆಸುತ್ತದೆ. 2019ರಲ್ಲಿ ಬತ್ತಿಹೋಗಿದ್ದ ಹುಲೇಕಲ್ ಗ್ರಾಮದ ಕಲ್ಯಾಣಿಯೊಂದರ ಹೂಳೆತ್ತುವ ಪ್ರಯೋಗ ನಡೆಸಲಾಗಿತ್ತು. ಅದು ಯಶಸ್ವಿಯಾಗಿ ಈಗ ಕಲ್ಯಾಣಿಯಲ್ಲಿ ನೀರು ಭರ್ತಿಯಾಗಿದೆ. ಹೀಗಾಗಿ, ಬುಗ್ಗೆಗಳ ಅಭಿವೃದ್ಧಿಗೆ ಈ ಭಾಗದಲ್ಲಿ ಅವಕಾಶವಿದೆ ಎಂಬುದನ್ನು ಮನಗಂಡಿದ್ದೇವೆ’ ಎಂದು ನಬಾರ್ಡ್ ತಾಂತ್ರಿಕ ವಿಭಾಗದ ಅಧಿಕಾರಿ ಚೌಡಾ ರೆಡ್ಡಿ ತಿಳಿಸಿದರು.

* ಜಲಾನಯನ ಅಭಿವೃದ್ಧಿಗೆ ನಬಾರ್ಡ್ ಕೈಗೆತ್ತಿಕೊಳ್ಳುತ್ತಿರುವ ಯೋಜನೆಗಳಲ್ಲಿ ಬುಗ್ಗೆಗಳ ಅಭಿವೃದ್ಧಿಯೂ ಒಂದಾಗಿದ್ದು, ಹಿಂದಿನ ಯೋಜನೆಗಳಿಗಿಂತ ಭಿನ್ನವಾಗಿದೆ.

- ರೇಜಿಸ್, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.