ADVERTISEMENT

ಕೈಹಿಡಿವ ವರದಾ ನದಿ ನೀರು: ಹಿಗ್ಗಿದ ಕಲ್ಲಂಗಡಿ ಬೆಳೆ ಪ್ರದೇಶ

ಬೇಸಿಗೆಯಲ್ಲಿ ಬನವಾಸಿ ಭಾಗದ ರೈತರ ಕೈಹಿಡಿವ ವರದಾ ನದಿ ನೀರು

ಗಣಪತಿ ಹೆಗಡೆ
Published 30 ಡಿಸೆಂಬರ್ 2022, 19:30 IST
Last Updated 30 ಡಿಸೆಂಬರ್ 2022, 19:30 IST
ಶಿರಸಿ ತಾಲ್ಲೂಕಿನ ಬನವಾಸಿ ಬಳಿ ಕಲ್ಲಂಗಡಿ ಬೆಳೆದಿರುವುದು
ಶಿರಸಿ ತಾಲ್ಲೂಕಿನ ಬನವಾಸಿ ಬಳಿ ಕಲ್ಲಂಗಡಿ ಬೆಳೆದಿರುವುದು   

ಶಿರಸಿ: ತಾಲ್ಲೂಕಿನ ಪೂರ್ವಭಾಗದಲ್ಲಿ ಹರಿಯುವ ವರದಾ ನದಿ ಕಲ್ಲಂಗಡಿ ಬೆಳೆ ಹುಲುಸಾಗಿ ಬೆಳೆಯಲು ವರವಾಗಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಕಲ್ಲಂಗಡಿ ಬೆಳೆಯುವವರ ಸಂಖ್ಯೆ ಹೆಚ್ಚುತ್ತಿದೆ.

ಬನವಾಸಿ, ಅಜ್ಜರಣಿ, ಭಾಶಿ, ತಿಗಣಿ, ಕಡಗೋಡ, ಇನ್ನಿತರ ಗ್ರಾಮಗಳಲ್ಲಿ ಮಳೆಗಾಲದ ಬಳಿಕ ರೈತರಿಗೆ ಕಲ್ಲಂಗಡಿ ಬೆಳೆ ನೆರವಾಗುತ್ತಿದೆ. ಈ ಮೊದಲು ಇಲ್ಲಿನ ರೈತರು ಅನಾನಸ್, ಶುಂಠಿ ಬೆಳೆಗಳತ್ತ ಒಲವು ತೋರುತ್ತಿದ್ದರು. ವರದಾ ನದಿ ಬೇಸಿಗೆಯಲ್ಲೂ ಬತ್ತದ ಪರಿಣಾಮ ಹೊಸ ಬೆಳೆಯಿಂದ ರೈತರು ಆದಾಯ ಗಳಿಸಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಸುಮಾರು 98 ಹೆಕ್ಟೇರ್ ಗಿಂತ ಹೆಚ್ಚು ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗಿತ್ತು. ಈ ಪ್ರಮಾಣ 120 ಹೆಕ್ಟೇರ್ ಗೂ ಹೆಚ್ಚು ವಿಸ್ತರಿಸಿದೆ. ಈ ಪೈಕಿ ಬಹುಪಾಲು ರೈತರು ಇಸ್ರೇಲ್ ಮಾದರಿಯ ಕೃಷಿ ಪದ್ಧತಿಗೆ ಮೊರೆ ಹೋಗಿದ್ದಾರೆ.

ADVERTISEMENT

ಮಳೆಗಾಲದ ಮುಗಿದ ಬಳಿಕ ಅಕ್ಟೋಬರ್ ಅಂತ್ಯದ ಹೊತ್ತಿಗೆ ಕಲ್ಲಂಗಡಿ ಬೆಳೆಗೆ ಗದ್ದೆ ಹದಗೊಳಿಸಿ ಬಿತ್ತನೆ ಮಾಡುವ ರೈತರು ಡಿಸೆಂಬರ್ ಹೊತ್ತಿಗೆ ಫಸಲು ಪಡೆಯುತ್ತಿದ್ದಾರೆ. ಲಾಭದಾಯಕ ಬೆಳೆಯಾಗಿರುವ ಕಾರಣ ಬೆಳೆಯುವವರ ಪ್ರಮಾಣ ಹೆಚ್ಚಿದೆ ಎಂಬುದು ಸ್ಥಳೀಯ ರೈತರ ಅಭಿಪ್ರಾಯ.

‘70 ದಿನದ ಅವಧಿಯಲ್ಲಿ ಕಲ್ಲಂಗಡಿ ಫಸಲು ಪಡೆಯಲು ಸಾಧ್ಯವಿದೆ. ದರ ಸ್ಥಿರವಾಗಿದ್ದರೆ ಇದು ಉತ್ತಮ ಬೆಳೆಯಾಗಿದೆ. ಚಳಿಗಾಲ ಮತ್ತು ಬೇಸಿಗೆ ಅವಧಿಯಲ್ಲಿ ಎರಡು ಬಾರಿ ಫಸಲು ಪಡೆಯಲು ಸಾಧ್ಯವಾಗುತ್ತಿದೆ. ಇದು ರೈತರನ್ನು ಸೆಳೆಯುತ್ತಿದೆ’ ಎನ್ನುತ್ತಾರೆ ಬನವಾಸಿಯ ರೈತ ರವಿ ಬಂಡೇರ.

‘ನೀರು ಕಡಿಮೆ ಇದ್ದರೂ ಇಸ್ರೇಲ್ ಮಾದರಿ ಕೃಷಿ ಮೂಲಕ ಇಡೀ ದಿನ ತೇವಾಂಶ ಕಾಯ್ದಿಟ್ಟುಕೊಳ್ಳಬಹುದಾಗಿದೆ. ಬಳ್ಳಿಗಳನ್ನು ರೋಗದಿಂದ ದೂರ ಮಾಡಲು ಔಷಧಗಳನ್ನು ದಿಬ್ಬಕ್ಕೆ ಅಳವಡಿಸಲಾದ ಹನಿ ನೀರಾವರಿ ಪೈಪ್‌ಗಳ ಮೂಲಕ ನೀಡಲಾಗುತ್ತದೆ. ಈ ಮೊದಲು ನೀರಿನ ಕೊರತೆಯಿಂದ ಬೇಸಿಗೆಯಲ್ಲಿ ಬನವಾಸಿ ಭಾಗದ ರೈತರಲ್ಲಿ ಕೃಷಿ ಮಾಡುವವರ ಸಂಖ್ಯೆ ಇಳಿಕೆಯಾಗಿತ್ತು. ಈಗ ನದಿಯಲ್ಲೂ ನೀರು ಇದೆ. ಬೇಸಿಗೆಯಲ್ಲಿ ಕಲ್ಲಂಗಡಿ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದೇವೆ’ ಎನ್ನುತ್ತಾರೆ ಅವರು.

ಸಹಾಯಧನ ಲಭ್ಯ:

‘ಬೇಸಿಗೆಯಲ್ಲಿ ಬನವಾಸಿ ಹೋಬಳಿಯ ಕೃಷಿಭೂಮಿ ಬಹುತೇಕ ಖಾಲಿ ಇರುತ್ತಿತ್ತು. ಒಂದೆರಡು ವರ್ಷಗಳಲ್ಲಿ ಕಲ್ಲಂಗಡಿ ಬೆಳೆ ಭೂಮಿಯನ್ನು ಬಿರು ಬೇಸಿಗೆಯಲ್ಲೂ ಹಸಿರಾಗುವಂತೆ ಮಾಡಿದೆ. ಕಲ್ಲಂಗಡಿ ಬೆಳೆಯುವ ರೈತರಿಗೆ ಮಲ್ಚಿಂಗ್ (ಪ್ಲಾಸ್ಟಿಕ್ ಹಾಳೆ) ಖರೀದಿಗೆ ಪ್ರತಿ ಎಕರೆಗೆ ಸರಾಸರಿ ₹5 ರಿಂದ 6 ಸಾವಿರ, ಹನಿ ನೀರಾವರಿ ಪದ್ಧತಿ ಅಳವಡಿಕೆ ಸೇರಿದಂತೆ ನಿರ್ವಹಣೆ ಕೆಲಸಕ್ಕೆ ₹4 ರಿಂದ 6 ಸಾವಿರ ಸಹಾಯಧನ ಲಭಿಸುತ್ತಿದೆ. ಇದು ರೈತರಿಗೆ ವರವಾಗಿದೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು.

---

ಕಲ್ಲಂಗಡಿ ಬೆಳೆ ಲಾಭದಾಯಕ ಎಂಬುದು ರೈತರಿಕೆ ಮನವರಿಕೆ ಆಗಿರುವ ಜತೆಗೆ ನದಿಯ ನೀರು ಲಭಿಸುತ್ತಿರುವ ಪರಿಣಾಮ ಬೆಳೆ ಪ್ರದೇಶ ವಿಸ್ತರಣೆಯಾಗಿದೆ.

- ಸತೀಶ ಹೆಗಡೆ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.