ADVERTISEMENT

ಕಿರು ಜಲಾಶಯದಿಂದ ಪಶ್ಚಿಮ ಘಟ್ಟದ ಅರಣ್ಯಕ್ಕೆ ಹಾನಿಯಿಲ್ಲ: ಸಚಿವ ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 6:18 IST
Last Updated 7 ಸೆಪ್ಟೆಂಬರ್ 2021, 6:18 IST
ಕಾರವಾರ ತಾಲ್ಲೂಕಿನ ಖಾರ್ಲ್ಯಾಂಡ್‌ಗಳ ಸರ್ವೆ ಕಾರ್ಯಕ್ಕೆ ಸಚಿವ ಮಾಧುಸ್ವಾಮಿ ಸೋಮವಾರ ಚಾಲನೆ ನೀಡಿದರು
ಕಾರವಾರ ತಾಲ್ಲೂಕಿನ ಖಾರ್ಲ್ಯಾಂಡ್‌ಗಳ ಸರ್ವೆ ಕಾರ್ಯಕ್ಕೆ ಸಚಿವ ಮಾಧುಸ್ವಾಮಿ ಸೋಮವಾರ ಚಾಲನೆ ನೀಡಿದರು   

ಕಾರವಾರ: '1,400 ಕಿರು ಜಲಾಶಯಗಳನ್ನು ಪಶ್ಚಿಮ ಘಟ್ಟದ ತಳಭಾಗದಲ್ಲಿ ನಿರ್ಮಿಸಲಾಗುವುದು. ಸ್ವಲ್ಪವೂ ಅರಣ್ಯ ಭೂಮಿಯನ್ನು ಬಳಸುವುದಿಲ್ಲ. ಸೂಕ್ಷ್ಮ ಪರಿಸರಕ್ಕೆ ಧಕ್ಕೆಯಾಗುವುದಿಲ್ಲ' ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಾಮಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಪಶ್ಚಿಮ ಘಟ್ಟಗಳ ಮೇಲಿನಿಂದ ಹರಿದು ಬರುವ ನದಿಗಳಲ್ಲಿ ಎರಡು, ಮೂರು ಮೀಟರ್ ಎತ್ತರದ ಕಿರು ಜಲಾಶಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರತಿ ಜಲಾಶಯದಿಂದ 50-60 ಎಕರೆ ಜಮೀನಿಗೆ ನೀರಾವರಿ ಮಾಡಲು ಸಾಧ್ಯವಿದೆ. ಅಗತ್ಯವಿದ್ದವರು ಬಳಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ' ಎಂದು ಸಮರ್ಥಿಸಿಕೊಂಡರು.

'ಪಶ್ಚಿಮ ಘಟ್ಟದಲ್ಲೇ ಕಾಮಗಾರಿ ಮಾಡಲಾಗುತ್ತದೆ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಕಾಡಿನ ನಡುವೆ ಕಾಮಗಾರಿಗೆ ಕಾನೂನು ತೊಡಕುಗಳಿವೆ. ನೀರು ಹರಿಯುವ ಪ್ರದೇಶದಲ್ಲೇ ಜಲಾಶಯಗಳನ್ನು ನಿರ್ಮಿಸಲಾಗುವುದು. ಯಾವುದೇ ಪರಿಸರ ಸೂಕ್ಷ್ಮ ಅಂಶಗಳಿಗೆ ತೊಂದರೆಯಾಗುವುದಿಲ್ಲ' ಎಂದು ಪ್ರತಿಪಾದಿಸಿದರು.

ADVERTISEMENT

ಕೇಂದ್ರ ಸರ್ಕಾರದ ಸಹಾಯದೊಂದಿಗೆ 3,500 ಕೋಟಿ ರೂಪಾಯಿ ವೆಚ್ಚದಲ್ಲಿ, ಪಶ್ಚಿಮ ಘಟ್ಟವಿರುವ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಯೋಜನೆ ಜಾರಿ ಮಾಡುವ ಬಗ್ಗೆ ಸಚಿವ ಮಾಧುಸ್ವಾಮಿ ಈ ಹಿಂದೆ ಹೇಳಿದ್ದರು. ಈ ಬಗ್ಗೆ ಪರಿಸರವಾದಿಗಳು, ತಜ್ಞರು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಾಮಗಾರಿ ಎಷ್ಟು ಸಮಂಜಸ ಎಂದು ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.