ADVERTISEMENT

ಅನಾಥ ಕುದುರೆ ರಕ್ಷಣೆ ಯಾರ ಹೊಣೆ ?

ರೈತರಿಗೆ ತೊಂದರೆ ನೀಡುತ್ತಿರುವ ಮೂಕಪ್ರಾಣಿ

ಶಾಂತೇಶ ಬೆನಕನಕೊಪ್ಪ
Published 23 ಜನವರಿ 2020, 19:45 IST
Last Updated 23 ಜನವರಿ 2020, 19:45 IST
ಅನಾರೋಗ್ಯದಿಂದ ಬಳಲುತ್ತಿದ್ದ ಕುದುರೆಯನ್ನು ಸಹೃದಯ ಯುವಕರು ವಾಹನದಲ್ಲಿ ಸಾಗಿಸಿ ಚಿಕಿತ್ಸೆ ಕೊಡಿಸಿದರು
ಅನಾರೋಗ್ಯದಿಂದ ಬಳಲುತ್ತಿದ್ದ ಕುದುರೆಯನ್ನು ಸಹೃದಯ ಯುವಕರು ವಾಹನದಲ್ಲಿ ಸಾಗಿಸಿ ಚಿಕಿತ್ಸೆ ಕೊಡಿಸಿದರು   

ಮುಂಡಗೋಡ: ಊರಿಂದೂರಿಗೆ ಸರಕುಗಳನ್ನು ಹೊತ್ತು ಸಾಗಿದ ಪ್ರಾಣಿಗಳು ಈಗ ಮಾಲೀಕರಿಗೆ ಬೇಡವಾಗಿವೆ. ಆಹಾರಕ್ಕಾಗಿ ಇವು ಹೊಲ–ಗದ್ದೆಗೆ ನುಗ್ಗಿ ರೈತರಿಂದ ಹೊಡೆತ ತಿನ್ನುತ್ತಿವೆ. ಸಹೃದಯರು ಮೂಕಪ್ರಾಣಿಗಳ ವೇದನೆಯನ್ನು ನೋಡಲಾರದೇ, ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದಾರೆ.

ಕಳೆದ ಕೆಲವು ತಿಂಗಳುಗಳ ಹಿಂದೆ ಯಾರೋ ಬಿಟ್ಟು ಹೋಗಿರುವ ಬಯಲುಸೀಮೆ ಕುದುರೆಗಳು ತಾಲ್ಲೂಕಿನಲ್ಲಿ ಸಂಚಾರ ನಡೆಸುತ್ತಿವೆ. ಅರೆಮಲೆನಾಡಿನಲ್ಲಿ ಅನಾಥವಾಗಿರುವ ಕುದುರೆಗಳ ಮಾಲೀಕರನ್ನು ಗುರುತಿಸುವ ಕೆಲಸ ಆಗಬೇಕೆಂಬ ಆಗ್ರಹ ಜನರದ್ದಾಗಿದೆ.

ನೂರಕ್ಕೂ ಹೆಚ್ಚು ಕುದುರೆಗಳು ತಾಲ್ಲೂಕಿನಲ್ಲಿ ನಿತ್ಯ ಕಾಣುತ್ತಿವೆ. ಕೆಲವು ಕುದುರೆಗಳು ಅನಾರೋಗ್ಯದಿಂದ ಬಳಲುತ್ತಿವೆ. ಕಾಲಿಗೆ ಹುಳ ಬಿದ್ದು ನಡೆಯಲೂ ಆಗದ ಸ್ಥಿತಿಯಲ್ಲಿ ಇವೆ. ರಸ್ತೆ ಮಧ್ಯೆ ನಿಲ್ಲುವ, ಗದ್ದೆಗೆ ನುಗ್ಗಿ ತೊಂದರೆ ನೀಡುತ್ತಿರುವ ಕುದುರೆಗಳು ಜನರಿಗೆ ಕಿರಿಕಿರಿಯಾಗುತ್ತಿವೆ.

ADVERTISEMENT

‘ಕಾಲಿಗೆ ಗಾಯವಾಗಿ ಹುಳಗಳು ಬಿದ್ದಿದ್ದವು. ನೋವಿನಿಂದ ನರಳುತ್ತಿದ್ದ ಕುದುರೆಯನ್ನು ಸ್ನೇಹಿತರ ಜೊತೆಗೂಡಿ ಹುಬ್ಬಳ್ಳಿಯ ಪಿಪಲ್ ಫಾರ್ ಎನಿಮಲ್ಸ್ ಸಂಸ್ಥೆಗೆ ಬಿಟ್ಟು ಬರಲಾಗಿದೆ. ಅಲ್ಲಿ ವೈದ್ಯರಿಂದ ಚಿಕಿತ್ಸೆ ಕೊಡಿಸಿ, ಆರೈಕೆ ಮಾಡಲಾಗುತ್ತಿದೆ. ನೋವಿನಿಂದ ನರಳುತ್ತಿರುವ ಕುದುರೆಗಳಿಗೆ ಸೂಕ್ತ ವ್ಯವಸ್ಥೆ ಮಾಡಬೇಕು’ ಹಿಂದು ಸಂಘಟನೆಯ ಮುಖಂಡ ಅಯ್ಯಪ್ಪ ಭಜಂತ್ರಿ ಹೇಳಿದರು.

‘ಗದ್ದೆಗಳಿಗೆ ನುಗ್ಗಿ ಗೋವಿನಜೋಳ ಇನ್ನಿತರ ಬೆಳೆ ಹಾನಿ ಮಾಡುತ್ತಿವೆ. ಅವುಗಳನ್ನು ಹೊಡೆದರೆ ನಮಗೆ ಮರುಕ ಉಂಟಾಗುತ್ತದೆ. ರೈತರಿಂದ ಪೆಟ್ಟು ತಿನ್ನುವುದನ್ನು ನೋಡಲು ಆಗುವುದಿಲ್ಲ. ಹಣ ಸಂಗ್ರಹಿಸಿ ಗಡಿಭಾಗದವರೆಗೆ ಕೆಲವು ಕುದುರೆಗಳನ್ನು ಬಿಟ್ಟು ಬರಲಾಗಿದೆ’ ಎನ್ನುತ್ತಾರೆ ರೈತ ಪರುಶುರಾಮ ಹೂಲಿಕಟ್ಟಿ.

‘ಅನಾರೋಗ್ಯ ಪೀಡಿತ ಕುದುರೆಗಳಿಗೆ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರಾಣಿ ಸಾಕುವ ಕೇಂದ್ರಗಳಿಗೆ ಸಾಗಿಸಲು ಸಹ ಚರ್ಚಿಸಲಾಗಿದೆ. ಸಂಘ, ಸಂಸ್ಥೆಗಳು ಇದಕ್ಕೆ ಕೈಜೋಡಿಸಬೇಕು’ ಎಂದು ತಹಶೀಲ್ದಾರ್ ಶ್ರೀಧರ ಮುಂದಲಮನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.