ಭಟ್ಕಳ: ‘ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಶೂಶ್ರೂಷೆ ಮಾಡುವಲ್ಲಿ ರಾಜಕೀಯ ಮಾಡಿದರೇ ಅಂತಹ ಬೆಳವಣಿಗೆಯನ್ನು ಸಹಿಸುವುದಿಲ್ಲ. ಅಂತಹ ದೂರು ಇನ್ನೊಮ್ಮೆ ಬಂದರೆ ಅವರನ್ನು ಈ ಜಿಲ್ಲೆಯಿಂದಲೇ ಹೊರಗೆ ಕಳುಹಿಸುತ್ತೇನೆ’ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ‘ಭಟ್ಕಳ ಸರ್ಕಾರಿ ಆಸ್ಪತ್ರೆಯ ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿಯಿಂದ ಆಸ್ಪತ್ರೆಯ ಪ್ರಗತಿ ವಿವರಣೆಯ ಸಂದರ್ಭದಲ್ಲಿ ಸಚಿವರು ಆಸ್ಪತ್ರೆಯ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
‘ಯಾವುದೇ ರೋಗಿಗಳಿಗೆ ಔಷಧಿಗಾಗಿ ಹೊರಗೆ ಚೀಟಿ ನೀಡಬಾರದು. ಹಣದ ಕೊರತೆಯಾದರೆ ನನಗೆ ಮಾಹಿತಿ ನೀಡಿ. ಬಡರೋಗಿಗಳಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ವಹಿಸಬೇಕು’ ಎಂದು ತಿಳಿಸಿದರು.
ಈ ಬಾರಿ ಮುಂಗಾರು ಉತ್ತಮವಾಗುವ ಸಾಧ್ಯತೆ ಇದ್ದು, ರೈತರಿಗೆ ಬೇಕಾದಷ್ಟು ಬೀಜ, ಗೊಬ್ಬರ ಸೇರಿದಂತೆ ಅವಶ್ಯವಿರುವ ಎಲ್ಲಾ ಪರಿಕರಗಳನ್ನು ಮೊದಲೆ ತಂದಿಡುವಂತೆ ಕೃಷಿ ಇಲಾಖೆಗೆ ತಿಳಿಸಿದರು.
‘ಮಳೆ ಮೌಲ್ಯಮಾಪನ ತುಕ್ಕು ಹಿಡಿದಿದ್ದು ಸರಿಯಾದ ಪ್ರಮಾಣ ತೋರಿಸುತ್ತಿಲ್ಲ. ದಾಖಲೆಯಲ್ಲಿ 33 ಸೆಂ.ಮೀ ಮಳೆ ದಾಖಲಾದರೆ ಮಳೆ ಮಾಪನ ಶೂನ್ಯ ತೋರಿಸುತ್ತದೆ. ಇದರಿಂದ ಬೆಳೆ ಹಾನಿಯಾದವರಿಗೆ ವಿಮೆ ಪರಿಹಾರ ಸಿಗುತ್ತಿಲ್ಲ ಎಂದು ನಿಮಗೆ ಮಾಹಿತಿ ಇದಿಯಾ’ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಭಟ್ಕಳ ತಾಲ್ಲೂಕಿಗೆ 17 ಹೊಸ್ ಬಸ್, 13 ಚಾಲಕರು, ಕೊರತೆಯಿದ್ದ ನಿರ್ವಾಹಕರನ್ನು ನೀಡಿದರೂ ಸರ್ಕಾರಿ ರಜೆ ಹಾಗೂ ಭಾನುವಾರ ಬಸ್ ಓಡಿಸುತ್ತಿಲ್ಲ ಏಕೆ ಎಂದು ವ್ಯವಸ್ಥಾಪಕರನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
‘ಪ್ರಯಾಣಿಕರು ಇಲ್ಲದೇ ಇರುವುದರಿಂದ ಹೀಗೆ ಮಾಡಿದ್ದೇವೆ’ ಎಂದು ಅಧಿಕಾರಿಗಳು ಸಮಜಾಯಿಸಿ ನೀಡಲು ಮುಂದಾದರು.
‘ಎಲ್ಲಾ ಪ್ರಯಾಣಿಕರು ಬಸ್ ನಿಲ್ದಾಣದಲ್ಲೇ ಇರುವುದಿಲ್ಲ. ಅವರ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಾರೆ. ಗ್ರಾಮೀಣ ಭಾಗದಲ್ಲಿ ಆಟೊ ಸೌಕರ್ಯವೂ ಇರುವುದಿಲ್ಲ. ಭಾನುವಾರ ಅವರು ಪೇಟೆಗೆ ಬರುದನ್ನೇ ಬಿಡಬೇಕಾ? ನೀವು ನಿಮ್ಮ ಕೈಯಿಂದ ನಿರ್ವಹಣೆ ಮಾಡುತ್ತಿರಾ, ನಿಮ್ಮ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕರೆ ಮಾಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಎಸ್‌ಆರ್‌ಟಿಸಿ ಡಿಸಿ ಅವರೊಂದಿಗೆ ತಕ್ಷಣ ಮೊಬೈಲ್ ಫೋನ್ ಮೂಲಕ ಮಾತನಾಡಿ, ‘ಇನ್ನು ಮುಂದೆ ಪ್ರಯಾಣಿಕರಿಂದ ಬಸ್ ಬರಲಿಲ್ಲ ಎಂಬ ದೂರು ಬರಬಾರದು’ ಎಂದು ಸೂಚನೆ ನೀಡಿದರು.
‘ಮೀನುಗಾರಿಕೆ ಇಲಾಖೆಯ ಇತಿಹಾಸದಲ್ಲೇ ನಾನು ಬಂದ ಮೇಲೆ 10 ಸಾವಿರ ಮನೆಗಳನ್ನು ಮಂಜೂರು ಮಾಡಿಸಿದ್ದು, ಅದು ಬಡವರಿಗೆ ಸರಿಯಾಗಿ ಉಪಯೋಗಕ್ಕೆ ಬರುವಂತೆ ಕೆಲಸ ಮಾಡಿ’ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.
ಹಿಂದುಳಿದ ವರ್ಗ, ಮೀನುಗಾರಿಕೆ ಇಲಾಖೆ, ಶಿಶು ಅಬಿವೃದ್ಧಿ, ಕೋರ್ಟ್ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಿದರು.
ಭಟ್ಕಳ ಉಪವಿಭಾಗಾಧಿಕಾರಿ. ಕೆ. ಲಕ್ಷ್ಮಿಪ್ರಿಯಾ, ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ತಾ.ಪಂ ಇಒ ವೆಂಕಟೇಶ ನಾಯಕ, ಗ್ಯಾರಂಟಿ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ರಾಜು ನಾಯ್ಕ, ಪುರಸಭೆ ಅಧ್ಯಕ್ಷ ಅಲ್ತಾಫ ಖರೂರಿ ತಾಲ್ಲೂಕುಮಟ್ಟದ ಹಿರಿಯ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.