
ಶಿರಸಿ: ‘ಮಹಿಳೆಯರ ಸುರಕ್ಷತೆಗಾಗಿ ಕಾನೂನಿನಲ್ಲಿ ಸಾಕಷ್ಟು ಅವಕಾಶಗಳಿದ್ದು, ವಿದ್ಯಾರ್ಥಿನಿಯರು ಯಾವುದೇ ಭಯವಿಲ್ಲದೆ ಸಂಕಷ್ಟದ ಸಮಯದಲ್ಲಿ ಪೊಲೀಸ್ ಇಲಾಖೆಯ ನೆರವು ಪಡೆಯಬೇಕು’ ಎಂದು ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ಹೇಳಿದರು.
ನಗರದ ಉಡುಪಿ ಎಕ್ಸಲೆನ್ಸ್ ಅಕಾಡೆಮಿ ಹಾಗೂ ಶಿರಸಿ ನಗರ ಪೊಲೀಸ್ ಠಾಣೆಯ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಸುರಕ್ಷತಾ ಜಾಗೃತಿ ಜಾಥಾದ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
‘ಕಾನೂನಿನ ಬಗ್ಗೆ ಅರಿವಿದ್ದಾಗ ಮಾತ್ರ ಅಪರಾಧಗಳನ್ನು ತಡೆಯಲು ಸಾಧ್ಯ. ಠಾಣೆಯ ಕಾರ್ಯವೈಖರಿಯನ್ನು ತಿಳಿದುಕೊಳ್ಳುವುದು ಮತ್ತು ತುರ್ತು ಸಹಾಯವಾಣಿಗಳ ಬಳಕೆಯ ಬಗ್ಗೆ ಜಾಗೃತರಾಗಿರುವುದು ಇಂದಿನ ಕಾಲಘಟ್ಟದಲ್ಲಿ ಅತ್ಯಗತ್ಯ’ ಎಂದು ತಿಳಿಸಿದರು.
ಇದಕ್ಕೂ ಮುನ್ನ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಮಹಿಳಾ ಸುರಕ್ಷತೆಯ ಘೋಷಣೆಗಳಿರುವ ಭಿತ್ತಿಫಲಕಗಳನ್ನು ಹಿಡಿದು ನಗರದ ಶಿವಾಜಿ ಚೌಕದಿಂದ ಐದುರಸ್ತೆ ಮಾರ್ಗವಾಗಿ ಪೊಲೀಸ್ ಠಾಣೆಯವರೆಗೆ ಬೃಹತ್ ಜಾಥಾ ನಡೆಸಿದರು.
ಶಿರಸಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ., ಕಾಲೇಜಿನ ಪ್ರಾಚಾರ್ಯ ರೋಷನ ಗೌಡ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆಯ ಒಳಗಿನ ಚಟುವಟಿಕೆಗಳು ಹೇಗೆ ನಡೆಯುತ್ತವೆ ಎಂಬುದನ್ನು ಇದೇ ವೇಳೆ ಪ್ರತ್ಯಕ್ಷವಾಗಿ ತೋರಿಸಿಕೊಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.