
ಯಲ್ಲಾಪುರ: ಪಟ್ಟಣದ ಕಾಳಮ್ಮ ನಗರದ ಮಹಿಳೆ ರಂಜಿತಾ ಬನ್ಸೊಡೆ ಹತ್ಯೆ ಮಾಡಿದ್ದ ಆರೋಪಿ ರಫೀಕ್ ಯಳ್ಳೂರ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಯಲ್ಲಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಮೃತದೇಹ ಪಟ್ಟಣದ ಹೊರವಲಯದ ಕಾಜಲವಾಡಾ ಅರಣ್ಯ ಪ್ರದೇಶದಲ್ಲಿ ಭಾನುವಾರ ನಸುಕಿನಜಾವ ಪತ್ತೆಯಾಗಿದೆ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶವ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ರಂಜಿತಾ, ರಫೀಕ್ ಇಬ್ಬರೂ ಸಹಪಾಠಿಗಳಾಗಿದ್ದರು. ವಿವಾಹಿತೆ ರಂಜಿತಾ ಪತಿಯಿಂದ ವಿಚ್ಛೇದನ ಪಡೆದು, ತನ್ನ ಪುತ್ರನೊಂದಿಗೆ ಕಾಳಮ್ಮ ನಗರದ ತಾಯಿ ಮನೆಯಲ್ಲಿ ವಾಸವಿದ್ದಳು. ಪ್ರೀತಿಸುವಂತೆ ರಫೀಕ್ ಆಕೆಯ ಮೇಲೆ ಒತ್ತಡ ಹೇರುತ್ತಿದ್ದ. ಇದನ್ನು ನಿರಾಕರಿಸಿದ್ದಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ಹತ್ಯೆಗೂ ಕಾರಣವಾಯಿತು' ಎಂದು ಪೊಲೀಸರು ಹೇಳಿದ್ದಾರೆ.
ಹತ್ಯೆಗೈದ ಆರೋಪಿ ಪತ್ತೆಗೆ ಅರಣ್ಯ ಪ್ರದೇಶದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ ವೇಳೆ ಮೃತದೇಹ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.