ADVERTISEMENT

ಗುಡ್ಡ ಕುಸಿತ: ಹಸೆಮಣೆ ಏರಬೇಕಾದ ಯುವತಿ ಚಿತೆಗೆ

ತಂಗಿಯ ಮದುವೆಗೆಂದು ಬಂಗಾರ ತಂದಿದ್ದ ಅಣ್ಣ

ನಾಗರಾಜ ಮದ್ಗುಣಿ
Published 9 ಮಾರ್ಚ್ 2021, 19:30 IST
Last Updated 9 ಮಾರ್ಚ್ 2021, 19:30 IST
   

ಯಲ್ಲಾಪುರ: ತಂಗಿಯ ಮದುವೆಗೆ ಆಭರಣ ಖರೀದಿ ಮಾಡಬೇಕೆಂದು ಅಣ್ಣ ಚಿಚ್ಚು ಎಡಿಗೆ, ಶಿವಮೊಗ್ಗಕ್ಕೆ ಹೋಗಿ ಸೋಮವಾರ ಸಂಜೆಯಷ್ಟೇ ವಾಪಸ್ ಬಂದು ಮನೆಯ ಹಾದಿ ಹಿಡಿದಿದ್ದ. ಇತ್ತ ಕೆಲಸಕ್ಕೆ ಹೋಗಿದ್ದ ಭಾಗಿ (21) (ಭಾಗ್ಯಶ್ರೀ) ಎಡಿಗೆ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾಳೆ.

ಇಡಗುಂದಿಯ ಸಂಪೇಬೈಲಿನ ತೋಟದಲ್ಲಿ ಸೋಮವಾರ ಮಣ್ಣು ಕುಸಿದು ನಾಲ್ವರು ಮೃತಪಟ್ಟ ಪ್ರಕರಣವು, ಹೊಸಳ್ಳಿ ಗಾಂವಠಾಣಾವನ್ನು ಬೆಚ್ಚಿ ಬೀಳಿಸಿದೆ. ಇಡೀ ಗೌಳಿ ಸಮುದಾಯವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಮೃತರಲ್ಲಿ ಲಕ್ಷ್ಮಿ ಹೊರತುಪಡಿಸಿ ಉಳಿದವರೆಲ್ಲ 21 ವರ್ಷ ಒಳಗಿನವರು. ಲಕ್ಷ್ಮಿ (38), ಸಂತೋಷ (17) ಹಾಗೂ ಮಾಳು (21) ಈ ಮೂವರು ದೋಯಿಪೋಡೆ ಕುಟುಂಬದವರಾಗಿದ್ದರು.

ADVERTISEMENT

ಮೃತ ಭಾಗ್ಯಶ್ರೀ ಎಡಿಗೆಯ ಮದುವೆಯು ಕೊಲ್ಲಾಪುರದ ಯುವಕನೊಂದಿಗೆ ನಿಶ್ಚಯವಾಗಿತ್ತು. ಅವರ ಅಣ್ಣ ಮದುವೆಯ ಬಂಗಾರ ಖರೀದಿಗೆಂದು ಶಿವಮೊಗ್ಗಕ್ಕೆ ಹೋಗಿ ವಾಪಸ್ ಬಂದು ಮನೆಗೆ ಆಗಷ್ಟೇ ತಲುಪಿದ್ದರು. ಅಷ್ಟರಲ್ಲೇ ತಂಗಿಯ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೆರಗಿತು.

ಮದುವೆ ನಿಗದಿಯಗಿದ್ದ ಭಾಗು ಎಡಿಗೆ

‘ಬೇಡವೆಂದರೂ ಕೇಳಲಿಲ್ಲ’:ಮಂಗಳವಾರ ನಡೆಯುವ ವಿಠ್ಠಲ ರುಕ್ಮಾಯಿ ದೇವರ ಜಾತ್ರೆಯ ಮೊದಲ ದಿನ ಗೌಳಿ ಸಮುದಾಯದಲ್ಲಿ ಯಾರೂ ಕೆಲಸಕ್ಕೆ ಹೋಗದಿರುವುದು ಸಂಪ್ರದಾಯ. ಅಂದು ಹೋಗಬೇಡಿ ಎಂದರೂ ಒಟ್ಟು ಏಳು ಮಂದಿ ಕೆಲಸಕ್ಕೆ ಸಂಪೇಬೈಲಿಗೆ ಹೋಗಿದ್ದರು ಎಂದು ಅವರ ಸಂಬಂಧಿಕರು ದುಃಖಿಸುತ್ತಾರೆ.

ಗುಡ್ಡದ ಮಣ್ಣನ್ನು ಕೆಳಗಿನಿಂದ ತೆಗೆಯುತ್ತಿದ್ದವರು, ಆಯಾಸವಾಗಿ ಅಲ್ಲೇ ನೀರು ಕುಡಿಯಲು ಕುಳಿತಿದ್ದರು. ಆಗ ಅವರ ಮೇಲೆ ಮಣ್ಣು ಕುಸಿದು ಜೀವಂತ ಸಮಾಧಿಯಾದರು. ಅವರಿಂದ ಸ್ವಲ್ಪ ದೂರದಲ್ಲಿ ಕುಳಿತಿದ್ದ ತಗ್ಗಿಬಾಯಿ, ಸೋನಿ, ಬೀರು ಎನ್ನುವವರು ಪ್ರಾಣಾಪಾಯದಿಂದ ಪಾರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.