
ಕಾರವಾರ: ಬೆರಳೆಣಿಕೆಯಷ್ಟು ಸ್ಪರ್ಧಿಗಳು, ಸ್ಪರ್ಧಿಗಳೇ ಪ್ರೇಕ್ಷಕರು... ಸಭಾಂಗಣದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಕಂಡಿದ್ದು ಖಾಲಿ ಕುರ್ಚಿಗಳಷ್ಟೆ.
ಇದು ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಸಭಾಂಗಣದಲ್ಲಿ ಶುಕ್ರವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯ.
ಯುವ ಜನೋತ್ಸವದಲ್ಲಿ ಆಯೋಜಿಸಿದ್ದ ಬಹುತೇಕ ಸ್ಪರ್ಧೆಗಳಿಗೆ ಮೂರ್ನಾಲ್ಕು ಸ್ಪರ್ಧಿಗಳಷ್ಟೇ ಪಾಲ್ಗೊಂಡಿದ್ದರು. ವಿಜ್ಞಾನ ಮಾದರಿ ಪ್ರದರ್ಶನಕ್ಕೆ ಕೇವಲ 3 ಮಾದರಿಗಳನ್ನು ತರಲಾಗಿತ್ತು. ಚಿತ್ರಕಲೆ ಸ್ಪರ್ಧೆಗೆ ಪಾಲ್ಗೊಳ್ಳಲು ದೂರದ ಕಾಲೇಜುಗಳಿಂದ ಬಂದಿದ್ದ ಸ್ಪರ್ಧಿಗಳು ಸ್ಪರ್ಧೆಗೆ ತಾಸುಗಟ್ಟಲೆ ಕಾಯಬೇಕಾಗಿ ಬಂತು. ಕೆಲವೇ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
‘ಚಿತ್ರಕಲೆಗೆ ಹಾಳೆ ಪೂರೈಸಲು ಅರ್ಧ ತಾಸು ಕಾಯಿಸಿದರು. ಸ್ಪರ್ಧಿಗಳು, ನಿರ್ಣಾಯಕರನ್ನು ಕೊಠಡಿಯ ಹೊರಗೆ ಕಾಯಿಸಿದರು. ವ್ಯವಸ್ಥೆ ಸರಿಯಾಗಿರಲಿಲ್ಲ’ ಎಂದು ವಿದ್ಯಾರ್ಥಿಯೊಬ್ಬರ ಪಾಲಕರು ದೂರಿದರು.
ಜಾನಪದ ನೃತ್ಯ, ಜಾನಪದ ಗೀತೆ, ಕಥೆ ಬರೆಯುವುದು, ಚಿತ್ರಕಲೆ, ಕವಿತೆ ರಚನೆ, ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆಗಳು ನಡೆದವು.
ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೇಕರ, ‘ಸರ್ಕಾರ ಯುವಜನೋತ್ಸವದಂತಹ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಯುವಕರಿಗೆ ಪ್ರೋತ್ಸಾಹ ನೀಡುತ್ತಿದೆ. ಯುವಜನತೆ ಈ ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆಯಬೇಕು’ ಎಂದರು.
ಕ್ರಿಮ್ಸ್ ನಿರ್ದೇಶಕಿ ಡಾ.ಪೂರ್ಣಿಮಾ ಆರ್.ಟಿ., ‘ಯುವ ಜನರು ದೇಶದ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಾರೆ. ಕಲಾ ಪ್ರತಿಭೆ ಮುನ್ನೆಲೆಗೆ ತರುವಲ್ಲಿ ಯುವ ಜನೋತ್ಸವ ಪ್ರಮುಖ ವೇದಿಕೆ’ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾಯಕ ಮಾತನಾಡಿದರು.
ಚುನಾವಣಾ ವಿಭಾಗದ ತಹಶೀಲ್ದಾರ್ ಪ್ರಮೋದ ನಾಯ್ಕ, ಅಮದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ ಗೌಡ, ಜಿಲ್ಲಾ ಯುವ ಒಕ್ಕೂಟ ಕಾರ್ಯದರ್ಶಿ ದಿಲೀಪ್ ಕೋಠಾರಕರ, ಅಭಿಷೇಕ ಕಳಸ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.