ADVERTISEMENT

ಆನ್‌ಲೈನ್’ನಲ್ಲಿ ವಿವಾಹ! ಕಂಪ್ಯೂಟರ್, ಮೊಬೈಲ್‌ನಲ್ಲಿ ವೀಕ್ಷಿಸಿದ ಸಂಬಂಧಿಕರು

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 14:17 IST
Last Updated 26 ಜುಲೈ 2020, 14:17 IST
ಮೊಹಮ್ಮದ್ ಆದಿಲ್ ಕೌಡ
ಮೊಹಮ್ಮದ್ ಆದಿಲ್ ಕೌಡ   

ಭಟ್ಕಳ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ವಿವಿಧ ಕ್ರಮಗಳನ್ನು ಜಾರಿ ಮಾಡಿದ್ದರ ಪರಿಣಾಮ ವಿವಾಹ ಕಾರ್ಯಕ್ರಮಗಳ ಮೇಲೂ ಆಗಿದೆ. ಇದರಿಂದ ಪಟ್ಟಣದ ಯುವಕರೊಬ್ಬರು ‘ಆನ್‌ಲೈನ್‌’ನಲ್ಲಿ ಮದುವೆಯಾಗಿದ್ದಾರೆ!

ಈ ಭಾಗದಿಂದ ಸಚಿವರಾದ ಮೊದಲ ರಾಜಕಾರಣಿ ಜುಕಾಕೊ ಶಮ್ಸುದ್ದೀನ್ ಅವರ ಮರಿಮೊಮ್ಮಗ ಮೊಹಮ್ಮದ್‌ ಆದಿಲ್ ಕೌಡ ಆನ್‌ಲೈನ್‌ನಲ್ಲಿ ಮದುವೆಯಾದವರು. ಮಾಲ್ಡೀವ್ಸ್‌ನಲ್ಲಿ ಪೈಲಟ್ ಆಗಿರುವ ಅವರು, (ತಂದೆ ಮೊಹಮ್ಮದ್ ಸ್ವಾಲೇಹ್ ಕೌಡ ಅವರೂ ಮಾಲ್ಡೀವ್ಸ್‌ನಲ್ಲಿ ಪೈಲಟ್ ಆಗಿದ್ದಾರೆ) ಲಾಕ್‌ಡೌನ್‌ಗೂ ಮೊದಲೇ ಹೆತ್ತವರೊಂದಿಗೆ ಉಮ್ರಾ ನಿರ್ವಹಿಸಲೆಂದು ಬೆಂಗಳೂರಿಗೆ ಬಂದಿದ್ದರು. ಲಾಕ್‌ಡೌನ್ ಜಾರಿಯಾದಾಗ ಅಲ್ಲೇ ಬಾಕಿಯಾಗಿದ್ದರು.

ಅವರಿಗೆ ಚೆನ್ನೈಯ ಅಂಬೂರಿನ ಆಫಿಯಾ ಮರಿಯಮ್ ಅವರೊಂದಿಗೆ ವಿವಾಹ ನಿಶ್ವಿತಾರ್ಥ ನಡೆದಿತ್ತು. ಕೊರೊನಾ ಕಾರಣದಿಂದ ಮದುವೆಗೆ ಎಲ್ಲರೂ ಒಂದೇ ಕಡೆ ಸೇರುವುದು ಕಷ್ಟವಾಗಿತ್ತು. ಹಾಗಾಗಿ ಎರಡೂ ಕುಟುಂಬದವರ ಸಮ್ಮತಿಯೊಂದಿಗೆ ಜುಲೈ 24ರಂದು ಬೆಂಗಳೂರಿನಲ್ಲಿ ಸರಳವಾಗಿ ಆನ್‌ಲೈನ್ ಮೂಲಕ ವಿವಾಹ ನಡೆಯಿತು.

ADVERTISEMENT

ವಿವಿಧೆಡೆ ಇದ್ದ ಎರಡೂ ಕುಟುಂಬದವರ ಸಂಬಂಧಿಗಳು, ಸ್ನೇಹಿತರು ‘ಸಿಸ್ಕೋ ಆ್ಯಪ್’ ಮೂಲಕ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ವಿವಾಹಕ್ಕೆ ಖಾಝಿ ಅವರನ್ನು ವರನ ಮನೆಗೆ ಆಹ್ವಾನಿಸಿ, ನಾಲ್ವರು ಆಪ್ತರ ಸಮ್ಮುಖದಲ್ಲಿ ಸಂಪ್ರದಾಯ ಪಾಲನೆ ಮಾಡಲಾಯಿತು.

‘ಆನ್‌ಲೈನ್ ವಿವಾಹಕ್ಕೆ ಕೊರೊನಾದ ಭಯವಿಲ್ಲ. ಅಲ್ಲದೇ ಯಾವುದೇ ಸಮಸ್ಯೆಯೂ ಇರುವುದಿಲ್ಲ. ಹಣದ ಉಳಿತಾಯವೂ ಆಗುತ್ತದೆ. ಇಂಥ ವಿವಾಹಗಳನ್ನು ಸಮಾಜ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸಬೇಕು’ ಎನ್ನುವುದು ಮೊಹಮ್ಮದ್ ಆದಿಲ್ ಕೌಡ ಅವರ ಅನಿಸಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.