ADVERTISEMENT

ಹೂವಿನಹಡಗಲಿ: ರೈತರಿಗೆ ಲಂಚದ ಬೇಡಿಕೆ, ಜೆಸ್ಕಾಂ ಎಇಇ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 10:03 IST
Last Updated 19 ಮಾರ್ಚ್ 2021, 10:03 IST
ಭ್ರಷ್ಟಾಚಾರ ನಿಗ್ರಹ ದಳ
ಭ್ರಷ್ಟಾಚಾರ ನಿಗ್ರಹ ದಳ   

ಹೂವಿನಹಡಗಲಿ: ನೀರಾವರಿ ಪಂಪ್ ಸೆಟ್‌ಗೆ ವಿದ್ಯುತ್ ಪರಿವರ್ತಕ (ಟಿಸಿ) ನೀಡಲು ರೈತರೊಬ್ಬರಿಂದ ಲಂಚ ಪಡೆಯುವಾಗ ಇಲ್ಲಿನ ಜೆಸ್ಕಾಂ ಉಪ ವಿಭಾಗದ ಎಇಇ ಆರ್.ಆರ್.ಭಾಸ್ಕರ್ ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ತಾಲ್ಲೂಕಿನ ಬಸರಹಳ್ಳಿ ತಾಂಡಾದ ರೈತ ಉಮೇಶನಾಯ್ಕ ಅವರ ಹೊಲದಲ್ಲಿ ಟಿಸಿ ಅಳವಡಿಸಲು ಜೆಸ್ಕಾಂ ಎಇಇ ಭಾಸ್ಕರ್ ₹50 ಸಾವಿರ ಲಂಚ ಕೇಳಿದ್ದರು. ರೈತ ಉಮೇಶನಾಯ್ಕ ಲೈನ್ ಮ್ಯಾನ್ ಮಾರುತಿ ಮೂಲಕ ₹25 ಸಾವಿರ ಮುಂಗಡ ತಲುಪಿಸಿ, ನಂತರ ಈ ಕುರಿತು ಎಸಿಬಿಗೆ ದೂರು ನೀಡಿದ್ದರು.

ಜೆಸ್ಕಾಂ ಕಚೇರಿ ಆವರಣದಲ್ಲಿ ಲೈನ್ ಮ್ಯಾನ್ ಮೂಲಕಮತ್ತೆ ₹20 ಸಾವಿರ ಲಂಚದ ಹಣ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಗಳಾದ ಎಇಇ ಭಾಸ್ಕರ್, ಲೈನ್ ಮ್ಯಾನ್ ಮಾರುತಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ಎಸಿಬಿ ಜಿಲ್ಲಾ ವರಿಷ್ಠಾಧಿಕಾರಿ ಗುರುನಾಥ ಮತ್ತೂರ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್ಪಿ ಎಂ.ಸಿ.ಶಿವಕುಮಾರ್, ಇನ್ ಸ್ಪೆಕ್ಟರ್ ಗಳಾದ ಹಿರೇಮಠ, ರವಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.