ADVERTISEMENT

ಹೊಸಪೇಟೆ: ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಬಂದ ಆಫ್ರಿಕಾ ಜಿರಾಫೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 10:30 IST
Last Updated 28 ಜನವರಿ 2023, 10:30 IST
ಹಂಪಿ ಜೂನಲ್ಲಿ ವಿಹರಿಸುತ್ತಿರುವ ಆಫ್ರಿಕಾದ ಜಿರಾಫೆ
ಹಂಪಿ ಜೂನಲ್ಲಿ ವಿಹರಿಸುತ್ತಿರುವ ಆಫ್ರಿಕಾದ ಜಿರಾಫೆ   

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ (ಹಂಪಿ ಜೂ) ಶನಿವಾರ ಆಫ್ರಿಕಾದ ಜಿರಾಫೆ ತರಲಾಗಿದೆ.

ಬಿಹಾರದಿಂದ ನಾಲ್ಕು ದಿನಗಳ ರಸ್ತೆ ಪ್ರಯಾಣ ಕ್ರಮಿಸಿ ಜಿರಾಫೆ ಹಂಪಿ ಜೂಗೆ ಬಂದಿದೆ. ನಾಲ್ಕು ವರ್ಷದ ಈ ಜಿರಾಫೆಗೆ ಶೀಘ್ರದಲ್ಲೇ ಮೈಸೂರು ಮೃಗಾಲಯದ ಜಿರಾಫೆ ಜೊತೆಯಾಗಲಿದೆ.

2017ರಲ್ಲಿ ಆರಂಭಗೊಂಡ ಹಂಪಿ ಜೂ, ರಾಜ್ಯದ ಮೂರನೇ ಹುಲಿ ಮತ್ತು ಸಿಂಹ ಸಫಾರಿ ಸ್ಥಳವಾಗಿದೆ. ಈಗಾಗಲೇ ಉದ್ಯಾನವನದಲ್ಲಿ ಹುಲಿ, ಸಿಂಹ, ಜಿಂಕೆ, ಸಾಂಬಾರ್, ಮೊಸಳೆ, ಕತ್ತೆಕಿರುಬ, ಚಿರತೆ, ಕರಡಿ, ಆಮೆ, ನರಿ ಸೇರಿದಂತೆ 80ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿವೆ.

'ಮೃಗಾಲಯದ ಪ್ರಾಣಿಗಳ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಮೈಸೂರು ಮೃಗಾಲಯ ನೀಡಿದ ಜೀಬ್ರಾ, ಕಾಡೆಮ್ಮೆ ಮತ್ತಿತರ ಪ್ರಾಣಿಗಳ ಬದಲಾಗಿ ನಾಲ್ಕು ವರ್ಷದ ಹೆಣ್ಣು ಜಿರಾಫೆಯನ್ನು ಪಟ್ನಾ ಮೃಗಾಲಯದಿಂದ ಹಂಪಿ ಮೃಗಾಲಯಕ್ಕೆ ತರಲಾಗಿದೆ. ಜಿರಾಫೆಗೆ ವಿಶೇಷವಾದ ಆವರಣವನ್ನು ಸಿದ್ಧಪಡಿಸಲಾಗಿದೆ. ಅದಕ್ಕೆ ಬೇಕಾದ ಆಹಾರ ಹಾಗೂ ಆರೈಕೆಯ ವ್ಯವಸ್ಥೆಯೂ ಕಲ್ಪಿಸಲಾಗಿದೆ. ಸುದೀರ್ಘ ಪ್ರಯಾಣದಿಂದ ಚೇತರಿಸಿಕೊಂಡ ಜಿರಾಫೆ ಲವಲವಿಕೆಯಿಂದ ಓಡಾಡುತ್ತಿದೆ' ಎಂದು‌ ಹಂಪಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎನ್.ಕಿರಣ್ ತಿಳಿಸಿದ್ದಾರೆ.

ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಡಿಸಿಎಫ್‌ ಎಂ.ಎನ್‌. ಕಿರಣ್‌ ಕುಮಾರ್‌ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.