ADVERTISEMENT

ಎಲ್ಲಾ ರೀತಿಯ ಜೂಜು ನಿಷೇಧಿಸಿ: ಎಐಡಿವೈಒ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 6:19 IST
Last Updated 8 ಜುಲೈ 2025, 6:19 IST

ಹೊಸಪೇಟೆ: ಆನ್‌ಲೈನ್‌ ಬೆಟ್ಟಿಂಗ್ ನಿಷೇಧಿಸಲು ಹೊಸ ಕಾನೂನನ್ನು ರೂಪಿಸಿ ಮುಂದಿನ ಅಧಿವೇಶನದಲ್ಲಿ ಚರ್ಚಿಸಿ ಜಾರಿಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿರುವುದು ಸ್ವಾಗತಾರ್ಹವಾದರೂ, ಎಲ್ಲಾ ಬಗೆಯ ಜೂಜನ್ನೂ ನಿಷೇಧಿಸಬೇಕು ಎಂದು ಆಲ್‌ ಇಂಡಿಯಾ ಡೆಮಾಕ್ರಟಿಕ್ ಯೂಥ್‌ ಆರ್ಗನೈಸೇಷನ್ (ಎಐಡಿವೈಒ) ಆಗ್ರಹಿಸಿದೆ.

ಈ ಸಂಬಂಧ ಸಂಘಟನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಎರ್ರಿಸ್ವಾಮಿ ಎಚ್.ಮುಂಡ್ರಿಗಿ ಮತ್ತು ಕಾರ್ಯದರ್ಶಿ ಪಂಪಾಪತಿ ಅವರು ಸೋಮವಾರ ಪತ್ರಿಕಾ ಹೇಳಿಕೆ ನೀಡಿದ್ದು, ಅಧಿಕೃತ, ನೋಂದಾಯಿತ ಬೆಟ್ಟಿಂಗ್ ಜಾಲತಾಣಗಳನ್ನು ಮತ್ತು ಕೌಶಲಾಧಾರಿತ ಬೆಟ್ಟಿಂಗ್ ಅನ್ನು ನಿಷೇಧಿಸದೇ, ಕೇವಲ ಅಕ್ರಮ ಹಾಗೂ ಅನಧಿಕೃತ ಬೆಟ್ಟಿಂಗ್ ಜಾಲಗಳ ಹಾಗೂ ಅದೃಷ್ಟ ಆಧಾರಿತ ಜೂಜಿನ ವಿರುದ್ಧ ನಿಷೇಧ ಹಾಗೂ ಶಿಕ್ಷೆ ಅನ್ವಯವಾಗುವಂತೆ ಕಾನೂನು ರೂಪಿಸಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ ಎಂದು ಹೇಳಿದ್ದಾರೆ.

ಬೆಟ್ಟಿಂಗ್ ಆ್ಯಪ್ ನೋಂದಾಯಿಸಿಕೊಳ್ಳಲು ಸರ್ಕಾರವೇ ಅವಕಾಶ ನೀಡುತ್ತಿದೆ. ಈ ಮೂಲಕ ಜೂಜನ್ನು ಹಿಂಬಾಗಿಲಿನ ಮೂಲಕ ಅಧಿಕೃತಗೊಳಿಸುವ ಹಾಗೂ ಇದರಿಂದ ಆದಾಯ ಹೆಚ್ಚಿಸಿಕೊಳ್ಳಲು ಹೊರಟಿರುವ ಸರ್ಕಾರದ ಈ ಹುನ್ನಾರವನ್ನು ಎಐಡಿವೈಒ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.