ADVERTISEMENT

ವಿಜಯನಗರ | ಬಾಳೆ ನಷ್ಟ; ತಕ್ಷಣ ಪರಿಹಾರ ಬಿಡುಗಡೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಮೇ 2022, 8:04 IST
Last Updated 12 ಮೇ 2022, 8:04 IST
ಸುದ್ದಿಗೋಷ್ಠಿ
ಸುದ್ದಿಗೋಷ್ಠಿ   

ಹೊಸಪೇಟೆ (ವಿಜಯನಗರ): ‘ಇತ್ತೀಚೆಗೆ ಸುರಿದ ಅಕಾಲಿಕ ಮಳೆಗೆ ಜಿಲ್ಲೆಯಾದ್ಯಂತ ಬಾಳೆ, ಭತ್ತ ಸೇರಿದಂತೆ ಇತರೆ ಬೆಳೆಗಳು ನಷ್ಟವಾಗಿವೆ. ಜಿಲ್ಲಾಡಳಿತ ತಕ್ಷಣವೇ ಸಮೀಕ್ಷೆ ಪೂರ್ಣಗೊಳಿಸಿ, ಆದಷ್ಟು ಶೀಘ್ರ ಪರಿಹಾರ ಬಿಡುಗಡೆಗೊಳಿಸಬೇಕು’ ಎಂದು ಅಖಿಲ ಭಾರತ ಕಿಸಾನ್‌ ಸಭಾ ರಾಜ್ಯ ಕಾರ್ಯದರ್ಶಿ ಜನಾರ್ದನ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಾಳೆ ಅತಿ ಹೆಚ್ಚು ಹಾನಿಯಾಗಿದೆ. ತ್ವರಿತ ಗತಿಯಲ್ಲಿ ಸಮೀಕ್ಷೆ ನಡೆಸಿ, ಪರಿಹಾರ ಬಿಡುಗಡೆಗೆ ಮುಂದಾಗಬೇಕು. ರಾಗಿ, ಭತ್ತ, ಮೆಕ್ಕೆಜೋಳ ಖರೀದಿಗೆ ಜಿಲ್ಲೆಯ ಎಲ್ಲೆಡೆ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.

ಕೃಷಿಗೆ ಸಂಬಂಧಿಸಿದ ಯೋಜನೆಗಳು ಅರ್ಹರ ಬದಲು ದಲ್ಲಾಳಿಗಳಿಗೆ ಪ್ರಯೋಜನವಾಗುತ್ತಿವೆ. ಇದನ್ನು ತಡೆಯಲು ಸ್ಥಳೀಯ ಮಟ್ಟದಲ್ಲಿ ರೈತ ಸಂಘಟನೆಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸಬೇಕು. ವಯಸ್ಸಾದ ರೈತರಿಗೆ ಮಾಸಿಕ ₹ 5,000 ಪಿಂಚಣಿ ನೀಡಬೇಕು. ರೈತರ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ನೀಡಬೇಕು ಎಂದು ಹಕ್ಕೊತ್ತಾಯ ಮಾಡಿದರು.

ADVERTISEMENT

ರಾಜ್ಯದಾದ್ಯಂತ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ 12 ಗಂಟೆ ನಿರಂತರ ವಿದ್ಯುತ್‌ ಪೂರೈಸಬೇಕು. ಗ್ರಾಮೀಣ ಭಾಗಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯಯ, ತಾಂತ್ರಿಕ ಸಮಸ್ಯೆ ನಿವಾರಣೆಗೆ ಕಾಯಂ ವಿಶೇಷ ಕಾರ್ಯಪಡೆ ರಚಿಸಬೇಕು. ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಈಗಾಗಲೇ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ. ಆದರೆ, ರಾಜ್ಯ ಸರ್ಕಾರ ಇದುವರೆಗೆ ಅವುಗಳನ್ನು ವಾಪಸ್‌ ಪಡೆದಿಲ್ಲ. ಕೂಡಲೇ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು. ವೈಜ್ಞಾನಿಕವಾಗಿ ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ, ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸದ ದಿನಗಳನ್ನು 250ಕ್ಕೆ ಹೆಚ್ಚಿಸಬೇಕು. ಕೇರಳದ ಮಾದರಿಯಲ್ಲಿ ₹ 600ಕ್ಕೆ ಕೂಲಿ ಏರಿಸಬೇಕು. ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ದಿನಕ್ಕೆ ₹ 309 ಕೂಲಿಯಿಂದ ಕಾರ್ಮಿಕರಿಗೆ ಮನೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಕಿಸಾನ್‌ ಸಭಾ ರಾಜ್ಯ ಉಪಾಧ್ಯಕ್ಷ ಎಚ್‌. ವೀರಣ್ಣ, ಜಿಲ್ಲಾ ಅಧ್ಯಕ್ಷ ಗುಡಿಹಳ್ಳಿ ಹಾಲೇಶ್‌, ಜಿಲ್ಲಾ ಕಾರ್ಯದರ್ಶಿ ಶಾಂತರಾಜ್‌ ಜೈನ್‌, ಜಿಲ್ಲಾ ಉಸ್ತುವಾರಿ ಎಚ್‌.ಎ. ಆದಿಮೂರ್ತಿ ಇದ್ದರು.

ದೇಶದ್ರೋಹ ಕಾನೂನಿಗೆ ತಡೆ ಸ್ವಾಗತಾರ್ಹ
ದೇಶದ್ರೋಹದ ಕಾನೂನು ತಡೆ ಹಿಡಿದಿರುವ ಸುಪ್ರೀಂಕೋರ್ಟಿನ ಕ್ರಮ ಸ್ವಾಗತಾರ್ಹವಾದುದು ಎಂದು ಅಖಿಲ ಭಾರತ ಕಿಸಾನ್‌ ಸಭಾ ರಾಜ್ಯ ಕಾರ್ಯದರ್ಶಿ ಜನಾರ್ದನ ತಿಳಿಸಿದರು.

ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ತಿಕ್ಕಲು ಬ್ರಿಟಿಷರು ಈ ಕಾನೂನು ಬಳಸುತ್ತಿದ್ದರು. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಕಾನೂನಿನ ಅವಶ್ಯಕತೆ ಇಲ್ಲ. ಪ್ರಶ್ನೆ ಮಾಡುವವರು, ಚಳವಳಿಗಾರರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಸರ್ಕಾರ ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿತ್ತು. ಅದಕ್ಕೆ ಸುಪ್ರೀಂಕೋರ್ಟ್‌ನಿಂದ ತಡೆ ಬಿದ್ದಿರುವುದು ಒಳ್ಳೆಯ ಬೆಳವಣಿಗೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.