ADVERTISEMENT

ಬೋಧಾವ್ಯ–2025 | ಆಯುರ್ವೇದ ವೈದ್ಯರಿಗೆ ಕಾರ್ಯಾಗಾರ ಡಿ.14ರಂದು: ಎಎಫ್‌ಐ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 6:00 IST
Last Updated 13 ಡಿಸೆಂಬರ್ 2025, 6:00 IST
ಡಾ.ಬಿ.ವಿ.ಭಟ್
ಡಾ.ಬಿ.ವಿ.ಭಟ್   

ಹೊಸಪೇಟೆ (ವಿಜಯನಗರ): ನೋವು ನಿವಾರಕಗಳಲ್ಲಿ ಆಯುರ್ವೇದ ಕ್ಷೇತ್ರದಲ್ಲೂ ಪರಿಣಾಮಕಾರಿ ಚಿಕಿತ್ಸಾ ವಿಧಾನಗಳಿವೆ. ವಿದ್ಧ, ಅಗ್ನಿಕರ್ಮ ವಿಧಾನಗಳು ಅವುಗಳಲ್ಲಿ ಪ್ರಮುಖವಾದುದು. ಇದರ ಬಗ್ಗೆ ಡಿ.14ರಂದು ವೈದ್ಯರಿಗೆ ಒಂದು ದಿನದ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ ಎಂದು ಭಾರತೀಯ ಆಯುಷ್ ಒಕ್ಕೂಟ (ಎಎಫ್‌ಐ) ತಿಳಿಸಿದೆ.

ಒಕ್ಕೂಟದ ಹೊಸಪೇಟೆ ಘಟಕದ ಅಧ್ಯಕ್ಷ ಡಾ.ಬಿ.ವಿ.ಭಟ್‌ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಸಾಯಿಲೀಲಾ ರಂಗಮಂದಿರದಲ್ಲಿ 14ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ರಾಷ್ಟ್ರಮಟ್ಟದ ಈ ಕಾರ್ಯಾಗಾರ ನಡೆಯಲಿದೆ, ಹೊರರಾಜ್ಯಗಳಿಂದ 200 ಮಂದಿ ಸಹಿತ 400ರಷ್ಟು ವೈದ್ಯರು, 50ಕ್ಕಿಂತ ಅಧಿಕ ರೋಗಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಪುಣೆಯ ವೈದ್ಯ ಡಾ.ಚಂದ್ರಕುಮಾರ್ ದೇಶಮುಖ್‌ ಅವರು ವಿದ್ಧ, ಅಗ್ನಿಕರ್ಮ ಚಿಕಿತ್ಸೆ ಕುರಿತು ಮಾಹಿತಿ ನೀಡಲಿದ್ದಾರೆ. ಮಧ್ಯಾಹ್ನದ ನಂತರ ಪ್ರಾಯೋಗಿಕ ಚಿಕಿತ್ಸೆ ನಡೆಯಲಿದೆ. ಈ ಚಿಕಿತ್ಸಾ ವಿಧಾನ ಕಲಿತ ವೈದ್ಯರು ತಮ್ಮ ಗ್ರಾಹಕ ರೋಗಿಗಳಿಗೆ ಇದನ್ನು ಮನವರಿಕೆ ಮಾಡಲಿದ್ದಾರೆ, ಈ ಮೂಲಕ ಮುಂದಿನ 10 ವರ್ಷದೊಳಗೆ ನೋವು ನಿವಾರಕ ಕ್ಷೇತ್ರದಲ್ಲಿ ಆಯುರ್ವೇದ ಪದ್ಧತಿಯನ್ನು ಮನೆಮಾತಾಗಿಸುವುದು ಈ ಕಾರ್ಯಾಗಾರದ ಉದ್ದೇಶ ಎಂದರು.

ADVERTISEMENT

‘ವಿದ್ಧ ಎಂದರೆ ಒಂದು ಬಗೆಯ ಸೂಜಿ ಚಿಕಿತ್ಸೆ, ಅಗ್ನಿಕರ್ಮ ಎಂದರೆ ನೋವಿನ ಮೂಲವನ್ನು ಹುಡುಕಿ ಶಾಖ ನೀಡಿ ನೋವು ನಿವಾರಿಸುವ ವಿಧಾನ. ಈ ಎರಡೂ ವಿಧಾನಗಳು ಬಹಳ ಪರಿಣಾಮಕಾರಿ ಎಂಬುದು ಈಗಾಗಲೇ ಸಾಬೀತಾಗಿದೆ. ಈಚೆಗೆ ನಗರದ ರೋಟರಿ ಸಭಾಂಗಣದಲ್ಲಿ ನಡೆದ ಉಚಿತ ಆಯುಷ್‌ ಚಿಕಿತ್ಸಾ ಶಿಬಿರದಲ್ಲೂ ಹಲವರು ಈ ಚಿಕಿತ್ಸೆಗೆ ಒಳಪಟ್ಟು ನೋವು ನಿವಾರಣೆ ಮಾಡಿಕೊಂಡಿದ್ದಾರೆ’ ಎಂದು ಡಾ.ಮುನಿವಾಸುದೇವ ರೆಡ್ಡಿ ಹೇಳಿದರು.

ಜಿಲ್ಲಾ ಆಯುಷ್‌ ಒಕ್ಕೂಟದ ಅಧ್ಯಕ್ಷ ಡಾ.ಕೇದಾರೇಶ್ವರ ಎಂ.ಡಿ., ಕಾರ್ಯದರ್ಶಿ ಡಾ.ಸಿಕಂದರ್ ಬಿ., ಬೋಧಾವ್ಯದ ಸಂಘಟನಾ ಕಾರ್ಯದರ್ಶಿ ಡಾ.ಗುರುಮಹಾಂತೇಶ ಟಿ.ಎಂ., ಡಾ.ದಾಸು ರಾವ್‌, ಡಾ.ಗುರುಬಸವರಾಜ್‌, ಡಾ.ಆನಂದ್‌, ಡಾ.ಶಬ್ಬೀರ್ ಅಹ್ಮದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.