ಹೊಸಪೇಟೆ (ವಿಜಯನಗರ): ಪ್ರತಿಯೊಬ್ಬರಲ್ಲಿ ಯಾವುದೇ ದೈಹಿಕ ಮತ್ತು ಮಾನಸಿಕ ಸಮಸ್ಯೆ ಇಲ್ಲದೆ ಸದೃಡ ಆರೋಗ್ಯ ಜೀವನವನ್ನು ಕಟ್ಟಬೇಕೆಂದರೆ ಆಯುರ್ವೇದ ಗಿಡಮೂಲಿಕೆಗಳು ಮತ್ತು ಔಷಧಿಗಳೇ ಸೂಕ್ತ ಎಂದು ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ.ಮುನಿವಾಸುದೇವ ರೆಡ್ಡಿ ಹೇಳಿದರು.
ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಶನಿವಾರ ಜಿಲ್ಲಾಡಳಿತ ಸಹಿತ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಆಯುರ್ವೇದ ನಡಿಗೆ ಜಾಥಾ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಪುರಾತನ ಕಾಲದಿಂದಲೂ ದೇಶಿಯ ಆಯುರ್ವೇದ ಚಿಕಿತ್ಸೆಗೆ ಬಹಳಷ್ಟು ಮಹತ್ವವಿದೆ. ಆಯುರ್ವೇದವು ಕೇವಲ ರೋಗಲಕ್ಷಣಗಳನ್ನು ನಿಗ್ರಹಿಸುವುದಲ್ಲದೆ, ಸಮಸ್ಯೆಯ ಮೂಲ ಕಾರಣವನ್ನು ಗುರುತಿಸಿ ಚಿಕಿತ್ಸೆ ನೀಡಲು ಸೂಕ್ತ ವೈದ್ಯಕೀಯ ಕ್ರಮವಾಗಿದೆ. ದೇಹದ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಔಷೋಧೋಪಚಾರವಿವೆ’ ಎಂದರು.
ಆಯುಷ್ ವೈದ್ಯಾಧಿಕಾರಿ ಡಾ.ಕೆ.ಎಚ್.ಗುರುಬಸವರಾಜ್ ಮಾತನಾಡಿದರು. ಸೆ.23 ರಂದು ನಡೆಯಲಿರುವ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ನಿಮಿತ್ತ ಆಯುರ್ವೇದದ ಮಹತ್ವ, ಉದ್ದೇಶ, ಪರಿಣಾಮಕಾರಿ ಚಿಕಿತ್ಸೆ ಮತ್ತು ವಿವರಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಯುರ್ವೇದ ನಡಿಗೆ ಜಾಥಾವನ್ನು ನಡೆಸಲಾಯಿತು. ಬಳಿಕ ಎಲ್ಲಾ ಆಧಿಕಾರಿಗಳು ಮತ್ತು ವಿದ್ಯಾರ್ಥಿಗಳು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು.
ಆಯುಷ್ ಇಲಾಖೆಯ ಡಾ.ಶಿವಶರಣಯ್ಯ, ಡಾ.ರೂಪ್ ಸಿಂಗ್ ರಾಥೋಡ್, ಡಾ.ಹೇಮಲತಾ, ಎಎಫ್‌ಐ ಘಟಕದ ಡಾ.ಕೇದಾರ್ ದಂಡಿನ್, ಡಾ.ಬಿ.ವಿ.ಭಟ್, ಪತಂಜಲಿ ಯೋಗ ಸಂಸ್ಥೆಯ ಕಿರಣ್ ಕುಮಾರ್, ರಾಜೇಶ್ ಕಾರ್ವಾ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.