ಹೊಸಪೇಟೆ (ವಿಜಯನಗರ): ಕೇಂದ್ರದ ಬಹುನಿರೀಕ್ಷಿತ ಬಜೆಟ್‌ನಲ್ಲಿ ವಿಜಯನಗರ ಜಿಲ್ಲೆಗೆ ಅಂತಹ ಕೊಡುಗೆ ಕೊಟ್ಟಿಲ್ಲ ಎಂದು ಕಾಣಿಸಿದರೂ, ದೇಶದ 50 ಪ್ರಮುಖ ಪ್ರವಾಸಿ ತಾಣಗಳಲ್ಲಿ ಉದ್ಯೋಗ ಆಧರಿತ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳುವ ಪ್ರಸ್ತಾವ ಮುಂದಿಡಲಾಗಿದೆ. ಇದರಲ್ಲಿ ಹಂಪಿಯೂ ಸೇರಿಕೊಂಡಿದೆಯೇ ಎಂಬ ಕುತೂಹಲ ಗರಿಗೆದರಿದೆ.
ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಹಂಪಿ ಮುಂಚೂಣಿಯಲ್ಲಿದೆ. ಅದಕ್ಕೊಂದು ದೊಡ್ಡ ಸ್ಥಾನ ಇದೆ. ಸದ್ಯ 50 ತಾಣಗಳು ಯಾವುವು ಎಂಬುದನ್ನು ಬಜೆಟ್‌ನಲ್ಲಿ ಬಹಿರಂಗಪಡಿಸಿಲ್ಲ. ಹಂಪಿಯೂ ಸೇರಿಕೊಂಡರೆ ಹಲವು ಅವಕಾಶಗಳು ಇಲ್ಲಿಗೆ ಒದಗಿಬರಲಿದೆ.
ಹೋಂಸ್ಟೇಗಳ ಆರಂಭಕ್ಕೆ ಮುದ್ರಾ ಸಾಲ ಈ ಯೋಜನೆಗಳಲ್ಲಿ ಪ್ರಮುಖವಾದುದು. ಹೋಂಸ್ಟೇಗಳನ್ನು ಸಹ ಉದ್ಯಮ ಎಂದು ಪರಿಗಣಿಸಿ ಭೂಮಿ ಖರೀದಿ, ಕಟ್ಟಡ ನಿರ್ಮಾಣ, ಇತರ ಸೌಲಭ್ಯ ಕಲ್ಪಿಸಲು ಸಾಲ ನೀಡುವ ಯೋಜನೆ ಜಾರಿಗೆ ಬಂದರೆ ಹಾಗೂ ಅದರಲ್ಲಿ ಹಂಪಿಯೂ ಇದೆ ಎಂದಾದರೆ ಬಹಳ ದೊಡ್ಡ ಅವಕಾಶ ಒದಗಿಬರಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಮೂಲಗಳು ತಿಳಿಸಿವೆ.
ಆತಿಥ್ಯ ನಿರ್ವಹಣೆ ಸಂಸ್ಥೆಗಳನ್ನು ಸ್ಥಾಪಿಸಿ ಯುವಕರ ಕೌಶಲ ಹೆಚ್ಚಿಸುವುದು, ಪ್ರವಾಸಿ ತಾಣಗಳಿಗೆ ಸಂಚಾರ ಮತ್ತು ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸುಲಭದ ವ್ಯವಸ್ಥೆ ಕಲ್ಪಿಸಿಕೊಡುವುದು, ಪ್ರವಾಸಿಗರಿಗೆ ಒದಗಿಸುವ ಸೌಲಭ್ಯ, ಸ್ವಚ್ಛತೆ, ಮಾರುಕಟ್ಟೆ ಪ್ರಯತ್ನಗಳ ವಿಚಾರದಲ್ಲಿ ರಾಜ್ಯಗಳಿಗೆ ಪ್ರೋತ್ಸಾಹಧನ ನೀಡುವುದು, ಇ–ವೀಸಾ ಸೌಲಭ್ಯಗಳು ಹಾಗೂ ಕೆಲವೊಂದು ಪ್ರವಾಸಿ ಗುಂಪುಗಳಿಗೆ ವೀಸಾ ಮುಕ್ತ ಸೌಲಭ್ಯಗಳನ್ನು ಕಲ್ಪಿಸುವಂತಹ ಯೋಜನೆಗಳೂ ಬಜೆಟ್‌ನಲ್ಲಿವೆ. ಇವೆಲ್ಲವೂ ಹಂಪಿಗೆ ಅನ್ವಯವಾಗುತ್ತವೆ ಎಂದಾದರೆ ಬಹಳ ದೊಡ್ಡ ಬದಲಾವಣೆಯನ್ನು ಈ ಭಾಗದಲ್ಲಿ ಕಾಣುವುದು ಸಾಧ್ಯವಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ಇನ್ನೊಂದು ಮಹತ್ವದ ಅಂಶವೆಂದರೆ, ಪ್ರವಾಸಿ ತಾಣಗಳ ಬಳಿ ಬೃಹತ್ ಹೋಟೆಲ್ ಸೇರಿದಂತೆ ಮೂಲಸೌಲಭ್ಯ ಕಲ್ಪಿಸುವುದು. ಇಲ್ಲಿ ರಾಜ್ಯಗಳು ಭೂಮಿ ಒದಗಿಸಿಕೊಡಬೇಕು, ಕೇಂದ್ರವು ಹೋಟೆಲ್‌ಗಳನ್ನು ನಿರ್ಮಿಸುತ್ತದೆ. ಇದು ಸಹ ಹಂಪಿಗೆ ಅನ್ವಯವಾದರೆ ಹಂಪಿಯ ಚಹರೆಯೇ ಬದಲಾಗಲಿದೆ.
ಏಕೈಕ ಅಧಿಕೃತ ಹೋಂಸ್ಟೇ
ಹಂಪಿಯಲ್ಲಿ ಸಾಕಷ್ಟು ಹೋಂಸ್ಟೇಗಳಿದ್ದರೂ ಪ್ರವಾಸೋದ್ಯಮ ಇಲಾಖೆಯ ದಾಖಲೆಗಳಲ್ಲಿ ಅವು ಇಲ್ಲ. ಇಲಾಖೆಯ ಮಾಹಿತಿ ಪ್ರಕಾರ ಹಂಪಿ ಸುತ್ತ ಒಂದೇ ಅಧಿಕೃತ ಹೋಂಸ್ಟೇ ಇಲ್ಲ. ಹೊಸಪೇಟೆಯಲ್ಲಿ ಮಾತ್ರ ಏಕೈಕ ಅಧಿಕೃತ ಹೋಂಸ್ಟೇ ಇದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.