ADVERTISEMENT

ಆಂಜನೇಯ ಜನ್ಮಸ್ಥಳ ವಿವಾದವಾಗಿಸಲು ಕೇಂದ್ರ ಸರ್ಕಾರ ಬಯಸುವುದಿಲ್ಲ: ಕಿಶನ್ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 7:49 IST
Last Updated 25 ಫೆಬ್ರುವರಿ 2022, 7:49 IST
ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ
ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ   

ಹೊಸಪೇಟೆ (ವಿಜಯನಗರ): ಆಂಜನೇಯನ ಜನ್ಮಸ್ಥಳದ ವಿವಾದದ ಕುರಿತು ನಾನೇನೂ ಮಾತನಾಡುವುದಿಲ್ಲ. ಭಾರತ ಸರ್ಕಾರ ಇದನ್ನು ವಿವಾದವಾಗಿಸಲು ಬಯಸುವುದಿಲ್ಲ' ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ ಹೇಳಿದರು.

ತಾಲ್ಲೂಕಿನ ಹಂಪಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ದೇವಾಲಯಗಳ ವಾಸ್ತುಶಿಲ್ಪ ಕುರಿತ ಎರಡು ದಿ‌ನಗಳ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಆಂಜನೇಯ ಹುಟ್ಟಿದ ಸ್ಥಳ ಜನರ ವಿಶ್ವಾಸದ ಪ್ರತೀಕ. ಅದನ್ನು ನಮ್ಮ ಸರ್ಕಾರ ಗೌರವಿಸುತ್ತದೆ. ರಾಮ, ಕೃಷ್ಣ, ಆಂಜನೇಯ ನಮ್ಮೂರಲ್ಲಿ ಜನಿಸಿದ್ದಾನೆ ಎಂದು ದೇಶದ ಬೇರೆ ಬೇರೆ ಭಾಗದ ಜನ ವಿಶ್ವಾಸ, ನಂಬಿಕೆ ಹೊಂದಿದ್ದಾರೆ. ಅದನ್ನು ಸರ್ಕಾರ ಗೌರವಿಸುತ್ತದೆ. ಹಾಗಾಗಿ ಈಗ ಉದ್ಭವಿಸಿರುವ ವಿವಾದದ ಕುರಿತು ನಾನೇನೂ ಮಾತನಾಡಲಾರೆ ಎಂದರು.

ADVERTISEMENT

ಇಂತಹ ವಿಷಯಗಳು ಎದುರಾದಾಗ ಜನರ ಮೇಲೆ ಬಿಡಬೇಕು. ಅದರ ಬಗ್ಗೆ ಚರ್ಚೆ ನಡೆಸಬಾರದು. ಇದು ವಿವಾದವೇ ಅಲ್ಲ, ವಿಶ್ವಾಸದ ವಿಷಯ ಎಂದಷ್ಟೇ ಹೇಳಿ ನೇರವಾಗಿ ಉತ್ತರಿಸಲಿಲ್ಲ.

ಕರ್ನಾಟಕದ ಸೋಮನಾಥಪುರ, ಬೇಲೂರು, ಹಳೇಬೀಡಿಗೆ ಯುನೆಸ್ಕೊ ಮಾನ್ಯತೆಗೆ ಪ್ರಸ್ತಾವ ಕಳಿಸಲಾಗಿದೆ. ಈಗಾಗಲೇ ಈ ಮೂರೂ ಸ್ಥಳಗಳಲ್ಲಿ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಅವುಗಳು ಯುನೆಸ್ಕೊ ಪಟ್ಟಿಯಲ್ಲಿ ಸೇರುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.