
ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಲೋಕಾರ್ಪಣೆ ಹಾಗೂ ವಿವಿಧ ಕಾಮಗಾರಿಗಳು ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಫಲಾನುಭವಿಗಳಿಗೆ ವಿವಿಧ ಇಲಾಖೆಗಳ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸಿದ್ದು, ಮಧ್ಯಾಹ್ನ 2ರ ಸುಮಾರಿಗೆ ಇಲ್ಲಿಗೆ ಹರಪನಹಳ್ಳಿಯಿಂದ ಆಗಮಿಸುವ ನಿರೀಕ್ಷೆ ಇದೆ.
ಅದಕ್ಕೆ ಮೊದಲಾಗಿ ಭಾನುವಾರ ಮಧ್ಯಾಹ್ನ ಪಟ್ಟಣದಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಪೂರ್ಣ ಕುಂಭ ಮೆರವಣಿಗೆ ನಡೆಯಿತು.
ಪಟ್ಟಣದ ಗ್ರಾಮ ದೇವತೆ ಊರಮ್ಮ ದೇವಸ್ಥಾನದಲ್ಲಿ ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಕೊಟ್ಟೂರಿನ ಡೋಣೂರ ಚಾನಕೋಟಿ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿ, ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿ, ಸಿದ್ದಯ್ಯನಕೋಟೆಯ ಚಿತ್ತರಗಿಯ ವಿಜಯ ಮಹಾಂತೇಶ್ವರ ಶಾಖಾ ಮಠದ ಬಸವಲಿಂಗ ಸ್ವಾಮಿ, ಬಂಜಾರ ಪೀಠದ ಪ್ರಕಾಶ ಸ್ವಾಮಿ ಅವರ ನೇತೃತ್ವದಲ್ಲಿ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ತಮ್ಮ ಪತ್ನಿ ಡಾ. ಪುಷ್ಪ ಅವರೊಂದಿಗೆ ತಾಲ್ಲೂಕಿನ 74 ಕೆರೆಗಳಿಂದ ತಂದಿದ್ದ ನೀರನ್ನು ತುಂಬಿದ್ದ ಪೂರ್ಣ ಕುಂಭಗಳಿಗೆ ಪೂಜೆ ಸಲ್ಲಿಸಿದರು. ನಂತರ ಮಹಿಳೆಯರು ಅವುಗಳನ್ನು ಹೊತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶಾಸಕರ ಕಚೇರಿ ಮುಂದಿನ ಕಾರ್ಯಕ್ರಮದ ಪ್ರಮುಖ ವೇದಿಕೆಗೆ ಬರಲಾಯಿತು.
ಮೆರವಣಿಗೆಯಲ್ಲಿ ಲಂಬಾಣಿ ಮಹಿಳೆಯರು ತಮ್ಮ ಸಾಂಪ್ರದಾಯಿಕ ನೃತ್ಯದ ಮೂಲಕ ಗಮನ ಸೆಳೆದರು. ಇವರೊಂದಿಗೆ ಶಾಸಕರು ಸೇರಿದಂತೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಪ್ರಮುಖರು ಹೆಜ್ಜೆ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.