ADVERTISEMENT

ಕುವೆಂಪು ಸಮಗ್ರ ಸಾಹಿತ್ಯದ 12ನೇ ಸಂಪುಟ ಮಾರಾಟಕ್ಕೆ ತಡೆ

ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿರುದ್ಧ ಕೃತಿಚೌರ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 22:15 IST
Last Updated 17 ಮಾರ್ಚ್ 2021, 22:15 IST
ಹಂಪಿ ಕನ್ನಡ ವಿಶ್ವವಿದ್ಯಾಲಯ–ಸಾಂದರ್ಭಿಕ ಚಿತ್ರ
ಹಂಪಿ ಕನ್ನಡ ವಿಶ್ವವಿದ್ಯಾಲಯ–ಸಾಂದರ್ಭಿಕ ಚಿತ್ರ   

ವಿಜಯನಗರ (ಹೊಸಪೇಟೆ): ಕೃತಿಚೌರ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ಕುವೆಂಪು ಸಮಗ್ರ ಸಾಹಿತ್ಯದ 12ನೇ ಸಂಪುಟದ ಮಾರಾಟಕ್ಕೆ ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷೆನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ ಬುಧವಾರ (ಮಾ.17) ತಡೆಯಾಜ್ಞೆ ನೀಡಿದ್ದಾರೆ.

1974ರಲ್ಲಿ ಬರೆದ ‘ಕುವೆಂಪು ಪತ್ರಗಳು’ ಪುಸ್ತಕದಿಂದ ಕುವೆಂಪು ಅವರ 62 ಪತ್ರಗಳನ್ನು ಯಥಾವತ್ತಾಗಿ ತೆಗೆದುಕೊಂಡು ಹಂಪಿ ಕನ್ನಡ ವಿಶ್ವವಿದ್ಯಾಲಯವು ಕುವೆಂಪು ಸಮಗ್ರ ಸಾಹಿತ್ಯದ ಹನ್ನೆರಡನೇ ಸಂಪುಟದಲ್ಲಿ ಪ್ರಕಟಿಸಿ ಕೃತಿಚೌರ್ಯ ಮಾಡಿದೆ ಎಂದು ಆರೋಪಿಸಿ ಪುಸ್ತಕದ ಲೇಖಕ ಪುಸ್ತಕಮನೆ ಹರಿಹರಪ್ರಿಯ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

‘ಈಗ ಸಮಗ್ರ ಕೃತಿಗಳಲ್ಲಿ 12ನೆಯ ಸಂಪುಟ ಮಾರಾಟ ಮಾಡದಂತೆ ನ್ಯಾಯಾಲಯ ತಡೆ ನೀಡಿದೆ. ಆನ್‌ಲೈನ್‌, ಆಫ್‌ಲೈನ್‌ ಹಾಗೂ ಯಾವುದೇ ಪುಸ್ತಕ ಮಳಿಗೆಯಲ್ಲಿ ಮಾರಾಟ ಮಾಡುವಂತಿಲ್ಲ. ಅಗತ್ಯ ಬಿದ್ದರೆ ಸಂಶೋಧನೆಯ ಉದ್ದೇಶಕ್ಕಾಗಿ ಮಾತ್ರ ಬಳಸಬಹುದು. ಈ ತಡೆಯಾಜ್ಞೆ ಆದೇಶ, ಪ್ರಕರಣ ಸಂಪೂರ್ಣ ಇತ್ಯರ್ಥಗೊಳ್ಳುವವರೆಗೆ ಜಾರಿಯಲ್ಲಿರುತ್ತದೆ ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ’ ಎಂದು ಪುಸ್ತಕಮನೆ ಹರಿಹರಪ್ರಿಯ ಅವರ ಪರ ವಾದ ಮಂಡಿಸುತ್ತಿರುವ ವಕೀಲ ಎಚ್‌.ಎಸ್‌. ವಿವೇಕಾನಂದ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

‘ನ್ಯಾಯಾಲಯದ ಆದೇಶ ಸ್ವಲ್ಪ ಸಮಾಧಾನ ತಂದಿದೆ. ವಿಶ್ವವಿದ್ಯಾಲಯ ಈಗಲಾದರೂ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕೃತಿಚೌರ್ಯ ಯಾವ ವಿಶ್ವವಿದ್ಯಾಲಯಕ್ಕೂ ಶೋಭೆ ತರುವುದಿಲ್ಲ’ ಎಂದು ಪುಸ್ತಕಮನೆ ಹರಿಹರಪ್ರಿಯ ಪ್ರತಿಕ್ರಿಯಿಸಿದ್ದಾರೆ.

‘ಸಂಪುಟ ಮಾರಾಟಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ’ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎ. ಸುಬ್ಬಣ್ಣ ರೈ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.