ADVERTISEMENT

ಹೊಸಪೇಟೆ: ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಎರಡನೇ ದಿನವೂ ಜನಜಂಗುಳಿ

​ಪ್ರಜಾವಾಣಿ ವಾರ್ತೆ
Published 25 ಮೇ 2021, 10:17 IST
Last Updated 25 ಮೇ 2021, 10:17 IST
ಹೊಸಪೇಟೆಯ ದೀಪಾಯನ ಶಾಲೆ ಮೈದಾನದಲ್ಲಿ ತೆರೆದಿದ್ದ ತಾತ್ಕಾಲಿಕ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಮಂಗಳವಾರ ಜನ ಮುಗಿಬಿದ್ದಿದ್ದರು
ಹೊಸಪೇಟೆಯ ದೀಪಾಯನ ಶಾಲೆ ಮೈದಾನದಲ್ಲಿ ತೆರೆದಿದ್ದ ತಾತ್ಕಾಲಿಕ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಮಂಗಳವಾರ ಜನ ಮುಗಿಬಿದ್ದಿದ್ದರು   

ಹೊಸಪೇಟೆ(ವಿಜಯನಗರ): ಮತ್ತೆ ಐದು ದಿನ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಸಾರ್ವಜನಿಕರು ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬಂದು ಅಗತ್ಯ ವಸ್ತು ಖರೀದಿಸಿದ್ದರಿಂದ ಜನಜಂಗುಳಿ ಕಂಡು ಬಂತು.

ಲಾಕ್‌ಡೌನ್‌ ಸಡಿಲಿಕೆಯ ಎರಡನೇ ದಿನವಾದ ಮಂಗಳವಾರ ಬೆಳಿಗ್ಗೆ ಆರರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ತಾತ್ಕಾಲಿಕ ತರಕಾರಿ ಮಾರುಕಟ್ಟೆ, ದಿನಸಿ ಮಳಿಗೆ, ಮಾಂಸದಂಗಡಿ ಹಾಗೂ ಪೆಟ್ರೋಲ್‌ ಬಂಕ್‌ಗಳ ಎದುರು ಜನರ ಸಾಲು ಕಂಡು ಬಂತು.

ಬೆಳಿಗ್ಗೆ ಆರು ಗಂಟೆಗೆ ರಸ್ತೆಗಿಳಿದ ಜನ ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣು ಖರೀದಿಸಿದರು. ಮಧ್ಯಾಹ್ನ 12ರ ವರೆಗೆ ಜನರ ಓಡಾಟ ಹೆಚ್ಚಾಗಿಯೇ ಇತ್ತು. ಲಾಕ್‌ಡೌನ್‌ ಸಡಿಲಿಕೆ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆ ಪೊಲೀಸರು ಕಾರ್ಯಪ್ರವೃತ್ತರಾದರು. ಅಂಗಡಿ ಮುಂಗಟ್ಟು, ತರಕಾರಿ, ಹಣ್ಣಿನ ವ್ಯಾಪಾರಿಗಳನ್ನು ಕಳುಹಿಸಿದರು. ಅಲ್ಲಲ್ಲಿ ನಿಂತುಕೊಂಡಿದ್ದ ಜನರಿಗೆ ಎಚ್ಚರಿಕೆ ಕೊಟ್ಟು ನಿರ್ಗಮಿಸುವಂತೆ ಸೂಚಿಸಿದರು.

ADVERTISEMENT

ತಳ್ಳುಗಾಡಿಗಳು ಒಂದೆಡೆ ನಿಂತು ವ್ಯಾಪಾರ ಮಾಡದಂತೆ ಸೂಚಿಸಿ, ಅವರನ್ನು ಕಳುಹಿಸಿದರು. ನಗರದ ನ್ಯಾಯಾಲಯದ ಬೀದಿ ಬದಿಯಲ್ಲಿ ಉಪಾಹಾರ ಮಾರಾಟ ಮಾಡುತ್ತಿದ್ದ ತಳ್ಳುಗಾಡಿಯವರಿಗೆ ಎಚ್ಚರಿಕೆ ಕೊಟ್ಟು, ಮುಚ್ಚಿಸಿದರು.

ಇನ್ನು, ದೀಪಾಯನ ಶಾಲೆ, ತಾಲ್ಲೂಕು ಕ್ರೀಡಾಂಗಣ, ರಾಮ ಟಾಕೀಸ್‌, ಗಾಂಧಿ ವೃತ್ತ, ಮೇನ್‌ ಬಜಾರ್‌ನಲ್ಲಿ ಜನದಟ್ಟಣೆ ಇತ್ತು. ಜಿಲ್ಲಾಡಳಿತ ತರಕಾರಿ, ಹಣ್ಣುಗಳಿಗೆ ಬೆಲೆ ನಿಗದಿಪಡಿಸಿದರೂ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರು.

‘ಎಪಿಎಂಸಿಯವರೇ ಹೆಚ್ಚಿನ ಬೆಲೆ ನಮಗೆ ಮಾರಿದ್ದಾರೆ. ನಾವು ಕಡಿಮೆ ಕೊಟ್ಟರೆ ನಮಗೆ ನಷ್ಟವಾಗುತ್ತದೆ. ಸಗಟು ವ್ಯಾಪಾರಿಗಳು ಸೂಕ್ತವಾದ ಬೆಲೆಗೆ ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು. ಆಗ ಎಲ್ಲರಿಗೂ ಸರಿಯಾದ ಬೆಲೆಗೆ ತರಕಾರಿ, ಹಣ್ಣು ಸಿಗುತ್ತದೆ. ನಮ್ಮನ್ನು ದೂರಿದರೆ ಯಾವುದೇ ಪ್ರಯೋಜನವಿಲ್ಲ’ ಎಂದು ತರಕಾರಿ ವ್ಯಾಪಾರಿ ಗಂಗಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.