ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ
ಹೊಸಪೇಟೆ (ವಿಜಯನಗರ): ಧರ್ಮಸ್ಥಳದ ಹೆಸರು ಕೆಡಿಸುವ ಷಡ್ಯಂತ್ರದಲ್ಲಿ ಕಾಂಗ್ರೆಸ್ ನೇರವಾಗಿ ಶಾಮೀಲಾಗಿದೆ, ಎನ್‌ಐಎ ತನಿಖೆ ಅಥವಾ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಎಸ್‌ಐಟಿ ತನಿಖೆಯಿಂದ ಮಾತ್ರ ನಿಜ ಸಂಗತಿ ಹೊರಬರಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಇಲ್ಲಿ ಗುರುವಾರ ಹಿಂದೂ ಮಹಾಗಣಪತಿಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2023ರ ಜುಲೈನಲ್ಲೇ ಧರ್ಮಸ್ಥಳದ ವಿರುದ್ಧ ಷಡ್ಯಂತ್ರಕ್ಕೆ ಯೋಜನೆ ರೂಪಿಸುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಸರ್ಕಾರಕ್ಕೆ ಮಾಹಿತಿ ನೀಡಿತ್ತು. ಆದರೆ ಸರ್ಕಾರ ಅದನ್ನು ತಡೆಯುವ ಪ್ರಯತ್ನ ಮಾಡಿಲ್ಲ, ಹೀಗಾಗಿ ಈ ಷಡ್ಯಂತ್ರದ ಕೇಂದ್ರ ಬಿಂದುವೇ ರಾಜ್ಯದ ಕಾಂಗ್ರೆಸ್ ಸರ್ಕಾರ ಎಂದು ಆರೋಪಿಸಿದರು.
‘ಧರ್ಮಸ್ಥಳದ ಕುರಿತ ಶ್ರದ್ಧೆಗೆ ಭಂಗ ತರುವುದೇ ಕೆಲವು ಎನ್‌ಜಿಒಗಳ ಉದ್ದೇಶ, ಆ ಮೂಲಕ ಮತಾಂತರಕ್ಕೆ ಪ್ರಯತ್ನಿಸುವ ವ್ಯವಸ್ಥಿತ ಹುನ್ನಾರ ಇಲ್ಲಿ ನಡೆದಿದೆ’ ಎಂದು ರವಿ ಶಂಕಿಸಿದರು.
ಸೌಜನ್ಯ ಕೊಲೆ ಪ್ರಕರಣದಲ್ಲಿ ಅವರ ಕುಟುಂಬದವರೇ ಧರ್ಮಸ್ಥಳದ ಧರ್ಮಾಧಿಕಾರಿ ಅಥವಾ ಅವರ ಕುಟುಂಬದ ಸದಸ್ಯರ ಬಗ್ಗೆ ದೂರು ನೀಡಿಲ್ಲ, ಸಿಬಿಐ ತನಿಖೆ ಸಹ ಆಗಿದೆ. ಆದರೆ, ಮುಖ್ಯಮಂತ್ರಿ ಅವರು ನೀವು ಸೌಜನ್ಯ ಪರವೋ, ಹೆಗ್ಗಡೆ ಪರವೋ ಎಂದು ಬಿಜೆಪಿಯನ್ನು ಕೇಳುವ ಮೂಲಕ ಹೆಗ್ಗಡೆಯವರನ್ನು ಇಲ್ಲಿ ನೇರವಾಗಿ ಎದುರು ತಂದು ನಿಲ್ಲಿಸಿದ್ದಾರೆ. ಇದು ಬಹುದೊಡ್ಡ ಅಪರಾಧ ಎಂದು ಅವರು ಅಭಿಪ್ರಾಯಪಟ್ಟರು.
‘ಯೂಟ್ಯೂಬರ್ ಸಮೀರ್ ಅವರು ಹೆಗ್ಗಡೆ ಅವರ ರೇಖಾಚಿತ್ರ ಬಿಡಿಸಿ ಅಪಪ್ರಚಾರ ಮಾಡಲು ಪ್ರಯತ್ನಿಸಿದರು. ಒಂದು ವೇಳೆ ಅವರ ಧರ್ಮದ ಕುರಿತು ಹೀಗೆ ಮಾಡುತ್ತಿದ್ದರೆ ಊರೂರು ಸುಟ್ಟು ಹೋಗಿರೋದು’ ಎಂದು ಸಿ.ಟಿ.ರವಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.