ಹೊಸಪೇಟೆ (ವಿಜಯನಗರ): ‘ದಂತಪುರಾಣ’ ಮಕ್ಕಳ ಸಿನಿಮಾಕ್ಕೆ ಈಗಾಗಲೇ ಮೂರು ರಾಜ್ಯ ಪ್ರಶಸ್ತಿಗಳು ಲಭಿಸಿದ್ದು, ನಿರ್ಮಾಣವಾದ ಆರು ವರ್ಷಗಳ ಬಳಿಕ ಹೊಸಪೇಟೆಯಲ್ಲಿ ಮಾತ್ರ ಫೆ.6ರಂದು ಈ ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ವಿಶಾಲ್ ರಾಜ್ ಹೇಳಿದರು.
ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಬಯಲು ಶೌಚಾಲಯ ಮುಕ್ತವಾಗಬೇಕು, ಮಕ್ಕಳು ಮೊಬೈಲ್ ಅನ್ನು ಹಿತಮಿತವಾಗಿ ಬಳಸಬೇಕು ಎಂಬ ಸಂದೇಶದೊಂದಿಗೆ ಹಳ್ಳಿ, ನಗರ ಜೀವನದ ಚಿತ್ರಣವನ್ನು ಈ ಸಿನಿಮಾ ಬಿಂಬಿಸುತ್ತದೆ. ನಗರದ ಮಿರಾಲಂ ಟಾಕೀಸ್‌ನಲ್ಲಿ ಈಗಾಗಲೇ ಮೂರು ದಿನ ಹೌಸ್‌ಫುಲ್ ಪ್ರದರ್ಶನಕ್ಕೆ ವ್ಯವಸ್ಥೆ ಆಗಿದೆ. ಇಲ್ಲಿನ ಯಶಸ್ಸನ್ನು ನೋಡಿಕೊಂಡು ಮುಂದೆ ಇತರ ಜಿಲ್ಲೆಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದರು.
ರಂಗಭೂಮಿ ಕಲಾವಿದೆಯೂ ಆಗಿರುವ 82 ವರ್ಷದ ಮಂಜುಳಮ್ಮ ಅವರು ಈ ಚಿತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಬಾಲನಟ ಬೆಂಗಳೂರಿನ ಅಹಿಲ್ ಅನ್ಸಾರಿ ಸಹಿತ ಹೊಸಪೇಟೆ, ಮರಿಯಮ್ಮನಹಳ್ಳಿ, ಇಳಕಲ್‌ಗಳಂತಹ ಉತ್ತರ ಕರ್ನಾಟಕ ಭಾಗದ ಬಾಲಕಲಾವಿದರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಲಾವಿದೆ ಮಂಜಮ್ಮ ಜೋಗತಿ ಅವರೂ ಪ್ರಮುಖ ಪಾತ್ರದಲ್ಲಿದ್ದಾರೆ. ಮಕ್ಕಳು ಮಾತ್ರವಲ್ಲ ಉಟುಂಬದ ಎಲ್ಲ ಸದಸ್ಯರೂ ಒಟ್ಟಾಗಿ ಕುಳಿತುಕೊಂಡು ನೋಡಬಹುದಾದ ಸಿನಿಮಾ ಇದು ಎಂದು ಹೇಳಿದರು.
‘ಅನುಭವ’ದ ಮಾದರಿ: ಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಒಂದು ಹಾಡಿಗೆ, ಬಾಲನಟನ ಪಾತ್ರಕ್ಕೆ ಹಾಗೂ ಪೋಷಕ ನಟಿ ಪಾತ್ರಕ್ಕೆ ರಾಜ್ಯಪ್ರಶಸ್ತಿಗಳು ಸಿಕ್ಕಿವೆ. ಆದರೆ ಥಿಯೇಟರ್‌ಗಳಲ್ಲಿ ಇದಕ್ಕೆ ಇನ್ನೂ ಪ್ರದರ್ಶನ ಭಾಗ್ಯ ಸಿಕ್ಕಿಲ್ಲ. ಈ ಹಿಂದೆ ‘ಅನುಭವ’ ಸಿನಿಮಾವನ್ನು ಬೆಂಗಳೂರಿನ ಒಂದೇ ಒಂದು ಥಿಯೇಟರ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಬಳಿಕ ಅದು ಜನಪ್ರಿಯತೆ ಪಡೆದು ರಾಜ್ಯದಾದ್ಯಂತ ಪ್ರದರ್ಶನ ಕಂಡಿತು. ಅದೇ ರೀತಿ ‘ದಂತಪುರಾಣ’ ಸಹ ಯಶಸ್ಸು ಗಳಿಸುವ ವಿಶ್ವಾಸದಲ್ಲಿದ್ದೇವೆ ಎಂದು ವಿಶಾಲ್ ರಾಜ್ ಹೇಳಿದರು.
ಚಿತ್ರದ ನಿರ್ಮಾಪಕ ನವೀನ್ ಶರ್ಮಾ, ಕಲಾವಿದೆ ಮಂಜಮ್ಮ ಜೋಗತಿ, ಶಿವಕುಮಾರ್, ಗಣೇಶ್ ಯಾದವ್, ಜೋಗಿ ತಾಯಪ್ಪ, ಯೊಹಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.