ADVERTISEMENT

ವಿಜಯನಗರ | ಸರ್ಕಾರಿ ಇಂಗ್ಲಿಷ್‌ ಭಾಷೆ ಶಾಲೆಗಳ ಸೆಳೆತ

ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗಳಿಗೂ ಭಾರಿ ಬೇಡಿಕೆ; ಪೋಷಕರಿಗೆ ಆಂಗ್ಲ ಭಾಷೆಯೇ ಅಚ್ಚುಮೆಚ್ಚು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 9 ಜೂನ್ 2022, 9:32 IST
Last Updated 9 ಜೂನ್ 2022, 9:32 IST
   

ಹೊಸಪೇಟೆ (ವಿಜಯನಗರ): ಅವಳಿ ಜಿಲ್ಲೆಗಳಾದ ವಿಜಯನಗರ–ಬಳ್ಳಾರಿಯಲ್ಲಿ ಸರ್ಕಾರಿ ಇಂಗ್ಲಿಷ್‌ ಭಾಷೆಯ ಶಾಲೆಗಳಲ್ಲಿ ಮಕ್ಕಳ ಪ್ರವೇಶ ಪಡೆಯಲು ಪೋಷಕರು ವಿಶೇಷ ಆಸಕ್ತಿ ತೋರಿಸುತ್ತಿದ್ದಾರೆ.

ವರ್ಷದಿಂದ ವರ್ಷಕ್ಕೆ ಹರಿದು ಬರುತ್ತಿರುವ ಅರ್ಜಿಗಳ ಸಂಖ್ಯೆಯೇ ಇದಕ್ಕೆ ಸಾಕ್ಷಿ. ಮಾತೃಭಾಷೆ ಕನ್ನಡಕ್ಕಿಂತ ಇಂಗ್ಲಿಷ್‌ಗೆ ಪೋಷಕರು ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದಾರೆ. ಆಂಗ್ಲ ಭಾಷೆ ಕಲಿತರೆ ಭವಿಷ್ಯದಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತವೆ ಎಂಬ ಭರವಸೆಯೊಂದಿಗೆ ಮಕ್ಕಳನ್ನು ಇಂಗ್ಲಿಷ್‌ ಶಾಲೆಗಳಿಗೆ ಸೇರಿಸುತ್ತಿದ್ದಾರೆ.

ಇದು ಕನ್ನಡ ಭಾಷೆಗಷ್ಟೇ ಸೀಮಿತವಾಗಿಲ್ಲ. ಉರ್ದು ಶಾಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಉರ್ದು ಬದಲು ಇಂಗ್ಲಿಷ್‌ ಆಯ್ಕೆಗೆ ಹೆಚ್ಚಿನವರು ಒಲವು ತೋರಿಸುತ್ತಿದ್ದಾರೆ. ಸರ್ಕಾರವು ಆರಂಭದಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಕೆಲ ಆಯ್ದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಇಂಗ್ಲಿಷ್‌ ಶಾಲೆಗಳನ್ನು ಆರಂಭಿಸಿತು. 30 ಮಕ್ಕಳಿಗೆ ಪ್ರವೇಶ ಅವಕಾಶ ಕಲ್ಪಿಸಿತು. ಆದರೆ, ವರ್ಷದಿಂದ ವರ್ಷಕ್ಕೆ ಅರ್ಜಿಗಳ ಸಂಖ್ಯೆಯೇ ಹೆಚ್ಚಾಗುತ್ತಲೇ ಇದೆ.

ADVERTISEMENT

2019ರಲ್ಲಿ 30 ಸೀಟುಗಳಿಗೆ ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಮೇರೆಗೆ ಪ್ರವೇಶ ನೀಡಲಾಗುತ್ತಿತ್ತು. ಈಗ ಹೆಚ್ಚಿನ ಅರ್ಜಿಗಳು ಬರುತ್ತಿರುವುದರಿಂದ ಲಾಟರಿ ಮೂಲಕ ಮಕ್ಕಳನ್ನು ಆಯ್ಕೆ ಮಾಡಿ ಪ್ರವೇಶ ಕಲ್ಪಿಸಲಾಗುತ್ತಿದೆ. ಪ್ರತಿ ತಾಲ್ಲೂಕಿಗೆ ಸರಾಸರಿ 6ರಿಂದ 7 ಶಾಲೆಗಳಿವೆ. ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಶಾಲೆಗಳ ಸಂಖ್ಯೆ ಹೆಚ್ಚಿಸಬೇಕೆನ್ನುವುದು ಪೋಷಕರ ಹಕ್ಕೊತ್ತಾಯವಾಗಿದೆ.

ಸದ್ಯ ವಿಜಯನಗರ ಜಿಲ್ಲೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ 35 ಆಂಗ್ಲ ಭಾಷೆಯ ಶಾಲೆಗಳು ನಡೆಯುತ್ತಿದ್ದರೆ, ಉರ್ದು ಶಾಲೆಗಳಲ್ಲಿ 10 ಇಂಗ್ಲಿಷ್‌ ಭಾಷೆ ಶಾಲೆಗಳನ್ನು ನಡೆಸಲಾಗುತ್ತಿದೆ. ಇನ್ನು, ಬಳ್ಳಾರಿ ಜಿಲ್ಲೆಯಲ್ಲಿ ಕನ್ನಡ ಶಾಲೆಗಳಲ್ಲಿ 31 ಇಂಗ್ಲಿಷ್‌, ಉರ್ದು ಶಾಲೆಗಳಲ್ಲಿ 7 ಆಂಗ್ಲ ಭಾಷೆಯ ಶಾಲೆಗಳನ್ನು ನಡೆಸಲಾಗುತ್ತಿದೆ. ಇಂಗ್ಲಿಷ್‌ ಶಾಲೆಗಳಲ್ಲಿ ಬೋಧನೆಗಾಗಿಯೇ ಶಿಕ್ಷಕರಿಗೆ ಈಗಾಗಲೇ ವಿಶೇಷ ತರಬೇತಿ ಕೊಟ್ಟು, ಅವರಿಗೆ ಪ್ರಮಾಣ ಪತ್ರ ಕೊಡಲಾಗಿದೆ.

ಪೂರ್ವ ಪ್ರಾಥಮಿಕಕ್ಕೂ ಬೇಡಿಕೆ:ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗಳಲ್ಲಿ ಎಲ್‌.ಕೆ.ಜಿ, ಯು.ಕೆ.ಜಿ.ಯಿಂದ ಹತ್ತನೇ ತರಗತಿ ವರೆಗೆ ಇಂಗ್ಲಿಷ್‌ನಲ್ಲಿ ಶಿಕ್ಷಣ ಕೊಡಲಾಗುತ್ತದೆ. ಸದ್ಯ ತಾಲ್ಲೂಕಿಗೊಂದು ಶಾಲೆಗಳನ್ನು ನಡೆಸಲಾಗುತ್ತಿದೆ. ಪೂರ್ವ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್‌ನಲ್ಲಿ ಶಿಕ್ಷಣ ಕೊಡುವುದರಿಂದ ಗ್ರಾಮೀಣ ಹಾಗೂ ನಗರ ಪ್ರದೇಶದವರು ಈ ಶಾಲೆಗಳ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಈ ಶಾಲೆಗಳಲ್ಲೂ ವಿದ್ಯಾರ್ಥಿಗಳ ಸಂಖ್ಯೆ 30ಕ್ಕೆ ಸೀಮಿತಗೊಳಿಸಲಾಗಿದೆ. ಆದರೆ, ಮಕ್ಕಳ ಪ್ರವೇಶಾತಿ ಪಡೆಯಲು ಪೋಷಕರು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.

ಪೋಷಕರು ಇಂಗ್ಲಿಷ್‌ ಭಾಷೆ ಶಾಲೆಗಳತ್ತ ವ್ಯಾಮೋಹ ಬೆಳೆಸಿಕೊಳ್ಳುತ್ತಿದ್ದರೂ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ವಿಜಯನಗರ–ಬಳ್ಳಾರಿ ಜಿಲ್ಲೆಯ ತಾಲ್ಲೂಕುವಾರ ಇಂಗ್ಲಿಷ್‌ ಶಾಲೆಗಳ ವಿವರ
ತಾಲ್ಲೂಕು ಶಾಲೆಗಳ ಸಂಖ್ಯೆ
ಹೊಸಪೇಟೆ
;12
ಹಗರಿಬೊಮ್ಮನಹಳ್ಳಿ;07
ಹೂವಿನಹಡಗಲಿ;7
ಕೂಡ್ಲಿಗಿ; 07
ಹರಪನಹಳ್ಳಿ;10
ಬಳ್ಳಾರಿ ಪೂರ್ವ; 14
ಬಳ್ಳಾರಿ ಪಶ್ಚಿಮ; 06
ಸಿರುಗುಪ್ಪ; 10
ಸಂಡೂರು; 07
ಕಂಪ್ಲಿ; 01

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.