
ಹೊಸಪೇಟೆ (ವಿಜಯನಗರ): ಮಧುಮೇಹದ ಭಯದಿಂದ ಕೆಲವೊಂದು ಆಹಾರ ಸೇವನೆ ಮಾಡದೆ ಇರುವುದು ಸರಿಯಲ್ಲ, ಮನೆಯಲ್ಲಿ ತಯಾರಿಸಿದ ಯಾವುದೇ ಆಹಾರವನ್ನು ಸೇವಿಸಬಹುದು. ಆದರೆ ಸಮಯ ಪರಿಪಾಲನೆ ಮಾತ್ರ ಅಗತ್ಯ ಎಂದು ಉಡುಪಿಯ ಖ್ಯಾತ ವೈದ್ಯೆ ಡಾ.ಶ್ರುತಿ ಬಲ್ಲಾಳ್ ಹೇಳಿದರು.
ಪತಂಜಲಿ ಯೋಗ ಸಮಿತಿ ಹಾಗೂ ಭಾರತೀಯ ಆಯುಷ್ ಫೆಡರೇಷನ್ (ಎಎಫ್‌ಐ) ಹೊಸಪೇಟೆ ಘಟಕಗಳ ವತಿಯಿಂದ ಭಾನುವಾರ ಇಲ್ಲಿ ನಡೆದ ಮಧುಮೇಹ ಕುರಿತ ಅರಿವು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ನಿಮ್ಮ ಪ್ರದೇಶಕ್ಕೆ ಒಗ್ಗುವ ಎಣ್ಣೆಯನ್ನು ಬಳಸಿ, ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೊಮ್ಮೆ ಬಳಸದೆ ಇರಲು ಪ್ರಯತ್ನಿಸಿ, ಮೂರು ಬಾರಿ ಆಹಾರ ಸೇವನೆಯ ನಡುವೆ ಹಣ್ಣುಗಳನ್ನು ಸೇವಿಸಬಹುದು. ಋತುಮಾನಕ್ಕೆ ತಕ್ಕಂತಹ ಯಾವ ಹಣ್ಣುಗಳನ್ನೂ ಸೇವಿಸಬಹುದು. ಒಣ ಹಣ್ಣು ಸೇವನೆ ಮಾಡಿದರೆ ಒಂದಿಷ್ಟು ವ್ಯಾಯಾಮ ಸಹ ಅಗತ್ಯ. ಆಹಾರ ವಿಚಾರದಲ್ಲಿ ಒಂದಿಷ್ಟು ಶಿಸ್ತು ಪಾಲಿಸಿದರೆ ಸಕ್ಕರೆ ಕಾಯಿಲೆಯನ್ನು ಸುಲಭವಾಗಿ ನಿಯಂತ್ರಣದಲ್ಲಿ ಇಡಬಹುದು’ ಎಂದು ಅವರು ಸಲಹೆ ನೀಡಿದರು.
ಕೊಪ್ಪಳ ಗವಿಸಿದ್ದೇಶ್ವರ ಆಯುರ್ವೇದ ಕಾಲೇಜ್‌ನ ಪ್ರೊಫೆಸರ್ ಡಾ.ಗಂಗಾಧರ ಟಿ.ಅರಳೇಳಿಮಠ ಮತ್ತು ಹೊಸಪೇಟೆ ಟಿಎಂಎಇ ಸೊಸೈಟಿ ಆಯುರ್ವೇದ ಕಾಲೇಜ್‌ನ ಸಹಾಯಕ ಪ್ರೊಫೆಸರ್ ಡಾ.ಸಂಪತ್ ಕುಮಾರ್ ಎಂ.ತೆಗ್ಗಿ ಅವರು ಆಯುರ್ವೇದ ಔಷಧಗಳು, ಆಹಾರ ಕ್ರಮಗಳು, ಯೋಗದಿಂದ ಮಧುಮೇಹವನ್ನು ಹೇಗೆ ನಿಯಂತ್ರಿಸಬಹುದು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು.
ಎಎಫ್‌ಐ ಹೊಸಪೇಟೆ ಘಟಕದ ಅಧ್ಯಕ್ಷ ಡಾ.ಬಿ.ವಿ.ಭಟ್, ಪತಂಜಲಿ ಯುವ ಭಾರತ ರಾಜ್ಯ ಪ್ರಭಾರಿ ಕಿರಣ್ ಕುಮಾರ್, ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಪ್ರೊ.ಎಫ್.ಟಿ.ಹಳ್ಳಿಕೇರಿ, ಶ್ರೀರಾಮ್, ಗುರುರಾಜ ಭಟ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.