ADVERTISEMENT

ಪ್ರವಾದಿ ಮೊಹಮ್ಮದ್‌ ಪೈಗಂಬರ್‌ಗೆ ಅವಹೇಳನ ಆರೋಪ: ಮುಸ್ಲಿಮರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 6:47 IST
Last Updated 20 ನವೆಂಬರ್ 2021, 6:47 IST
   

ಹೊಸಪೇಟೆ (ವಿಜಯನಗರ): ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ಅವಹೇಳನ ಮತ್ತು ತ್ರಿಪುರ ರಾಜ್ಯದಲ್ಲಿ ನಡೆದಿದೆ ಎನ್ನಲಾದ ಮುಸ್ಲಿಮರ ಮೇಲಿನ ದೌರ್ಜನ್ಯ ಖಂಡಿಸಿ ಸಾವಿರಾರು ಜನ ಮುಸ್ಲಿಮರು ಶನಿವಾರ ನಗರದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಅಂಜುಮನ್‌–ಖಿದ್ಮತೆ–ಇ–ಇಸ್ಲಾಂ ಸಂಘಟನೆಯು ಪ್ರತಿಭಟನೆಗೆ ಕರೆ ಕೊಟ್ಟಿತ್ತು. ನಗರದಲ್ಲಿ ಎಲ್ಲ ರೀತಿಯ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿರುವ ಮುಸ್ಲಿಮರು, ಆಯಾ ಬಡಾವಣೆಯ ಮಸೀದಿಗಳ ಎದುರು ಸೇರಿ, ಅಲ್ಲಿಂದ ಮೂರಂಗಡಿ ವೃತ್ತದ ಬಳಿಯಿರುವ ದೊಡ್ಡ ಮಸೀದಿ ಬಳಿ ಸೇರಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ರಾಷ್ಟ್ರಪತಿಯವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ತುಂತುರು ಮಳೆಯಲ್ಲೇ ಸಾವಿರಾರು ಸಂಖ್ಯೆಯ ಜನ ದೊಡ್ಡ ಮಸೀದಿ ಬಳಿ ಸೇರಿದ್ದರಿಂದ ಸೋಗಿ ಮಾರುಕಟ್ಟೆ, ಮಹಾತ್ಮ ಗಾಂಧಿ ವೃತ್ತ, ಮೇನ್‌ ಬಜಾರ್‌ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

ADVERTISEMENT

ನರಸಿಂಗಾನಂದ, ವಸೀಂ ರಿಜ್ವಿ ಎಂಬುವರು ಪದೇ ಪದೇ ಮೊಹಮ್ಮದ್‌ ಪೈಗಂಬರ್‌ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡುತ್ತಿದ್ದಾರೆ. ಅವರು ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಅವರ ಮಾತುಗಳಿಂದ ಮುಸ್ಲಿಂ ಸಮಾಜದವರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ತ್ರಿಪುರ ರಾಜ್ಯದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಅವರ ಸಾಂವಿಧಾನಿಕ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಅದನ್ನು ನೋಡಿಕೊಂಡು ಮೌನ ವಹಿಸಿರುವುದು ಸರಿಯಲ್ಲ. ಅಮಾಯಕರ ಪ್ರಾಣ, ಆಸ್ತಿ ರಕ್ಷಿಸಬೇಕೆಂದು ಆಗ್ರಹಿಸಿದರು.

ದೇಶದಾದ್ಯಂತ ನೆಲೆಸಿರುವ ಮುಸ್ಲಿಮರ ಪ್ರಾಣ, ಅವರ ಧಾರ್ಮಿಕ ಸ್ಥಳಗಳಿಗೆ ಸೂಕ್ತ ರಕ್ಷಣೆ ಕೊಡಬೇಕು. ಪ್ರವಾದಿ ಮೊಹಮ್ಮದ್‌ ಪೈಗಂಬರ್‌, ಕುರಾನ್‌ ಬಗ್ಗೆ ಅವಹೇಳನಕಾರಿ ಮಾತನಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ನರಸಿಂಗಾನಂದ, ವಸಿಂ ರಿಜ್ವಿ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹಕ್ಕೊತ್ತಾಯ ಮಾಡಿದರು. ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.