ADVERTISEMENT

Hampi Utsav 2025 | ಹಂಪಿ ಉತ್ಸವದಲ್ಲಿ ಆಕರ್ಷಕ ಶ್ವಾನ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2025, 10:23 IST
Last Updated 2 ಮಾರ್ಚ್ 2025, 10:23 IST
   

ಹೊಸಪೇಟೆ (ವಿಜಯನಗರ): ಹಂಪಿ ಉತ್ಸವದ ಕೊನೆಯ ದಿನವಾದ ಭಾನುವಾರ ಜಿಲ್ಲಾಡಳಿತ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಕಮಲಾಪುರದ ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರದ (ಹವಾಮಾ) ಕಚೇರಿ ಹಿಂಭಾಗದಲ್ಲಿ ಹಮ್ಮಿಕೊಂಡಿದ್ದ ಶ್ವಾನಪ್ರದರ್ಶನವು ಜನರನ್ನು ಆಕರ್ಷಿಸಿತು.

ಮೊದಲಿಗೆ ವಿಜಯನಗರ ಜಿಲ್ಲಾ ಪೊಲೀಸ್ ಶ್ವಾನದಳದ (ಲ್ಯಾಬ್ರಡರ್ ತಳಿಯ) ಕರ್ತವ್ಯದ ಕರಾಮತ್ತ್ತು ಪ್ರದರ್ಶಿಸಿದವು. ಅಪರಾಧ ಪ್ರಕರಣಗಳ ಪತ್ತೆ ಮತ್ತು ಬಾಂಬ್ ಪರಿಶೀಲನೆ ಕರ್ತವ್ಯ ನಿರ್ವಹಿಸಿದ ಇವುಗಳ ಚಾಣಾಕ್ಷತೆಯನ್ನು ಕಣ್ತುಂಬಿಕೊಂಡ ಜನರು ನಾಯಿಗಳ ಜಾಣ್ಮೆಗೆ ಮಾರುಹೋದರು. ತರಬೇತುದಾರರ ಆಜ್ಞೆಯಂತೆ ನಡೆಯುವ ಈ ಶ್ವಾನಗಳು ನಿಂತಲ್ಲೇ ನಿಲ್ಲುವುದು, ಕೂರುವುದು, ಓಡಾಡುವುದು ಕಂಡ ಜನರು ಆಶ್ಚರ್ಯ ಚಕಿತರಾದರು.

21 ಜಾತಿಯ 65 ಶ್ವಾನಗಳು ಭಾಗಿ: ಈ ಬಾರಿಯ ಹಂಪಿ ಉತ್ಸವದಲ್ಲಿ 21 ವಿವಿಧ ಜಾತಿಯ ದೇಶಿ ಹಾಗೂ ವಿದೇಶಿ ತಳಿಗಳ 65 ಶ್ವಾನಗಳು ತಮ್ಮ ಮಾಲೀಕರೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅದರಲ್ಲಿ 48 ಶ್ವಾನಗಳು 1 ವರ್ಷದೊಳಗಿನವು (ಅಡಲ್ಟ್ ವರ್ಗ), ಅದೇರೀತಿಯಾಗಿ 17 ಶ್ವಾನ 6 ತಿಂಗಳಿನವು (ಪಪ್ಪಿ ವರ್ಗ) ಇದ್ದವು.

ADVERTISEMENT

ವಿವಿಧ ಜಾತಿಗೆ ಸೇರಿದ ಶ್ವಾನ:

ಅತಿ ಎತ್ತರ, ದೊಡ್ಡ ಹಾಗೂ ನೀಳ ಕಾಯದ ಗ್ರೇಟ್ ಡೆನ್, ಚಿಕ್ಕದಾದ ಸಿಟ್ಸ್ ಹಾಗೂ ಪಮೋರಿಯನ್, ಬೇಟೆಗೆ ಹೆಸರಾದ ಮುಧೋಳ, ಕುಟುಂಬಕ್ಕೆ ಪ್ರಿಯವಾದ ಗೋಲ್ಡನ್ ರಿಟೈವರ್, ಶೀತ ವಲಯದಲ್ಲಿ ಮಾನವ ಅತ್ಯಂತ ಉಪಯುಕ್ತ ಸಂಗಾತಿ ಎನಿಸಿದ ಸೈಬಿರಿಯನ್ ಹಸ್ಕಿ, ಯುದ್ಧಕ್ಕೆ ಹೆಸರುವಾಸಿಯಾದ ಜರ್ಮನ್ ಶಫರ್ಡ್, ಮಾಲೀಕನಿಗೆ ಅತ್ಯಂತ ನಿಷ್ಠೆಯಿಂದಿರುವ ಡಾಬರ್ ಮನ್, ಭಾರತದಲ್ಲಿ ಜನಪ್ರಿಯ ಹೊಂದಿರುವ ಲ್ಯಾಬ್ರಡಾರ್, ಅಮೇರಿಕಾದ ಬುಲ್ಲಿ, ಬೇಗಲೆ, ಡ್ಯಾಷ್‌ಹಂಡ್, ಪಗ್, ರೊಟ್‌ವೀಲರ್, ಬಾಕ್ಸರ್, ಪೊಮೆರೇನಿಯನ್, ಚೌ ಚೌ, ಶಿಹ್ ತ್ಸು ಬುಲ್ಲಿ, ಕೇನ್ ಕೊರ್ಸೊ, ಕಾಕರ್ ಸ್ಪೈನಿಯಲ್, ಕಾಕರ್, ಗ್ರೇಟ್ ಡೇನ್, ಟಾಯ್ ಪೋಮ್, ಬೆಲ್ಜಿಯನ್ ಮಾಲಿನೋಸಿಸ್ ಸೇರಿ ಅನೇಕ ತಳಿಗಳ ಶ್ವಾನಗಳು ಸ್ಪರ್ಧೆಯ ವಿಶೇಷ ಎನಿಸಿದವು.

ತಳಿಗಳವಾರು ಮೊದಲು ಸ್ಪರ್ಧೆ ನಡೆಸಿ ಶ್ವಾನಗಳನ್ನು ಆಯ್ಕೆ ಮಾಡಲಾಯಿತು. ತಳಿವಾರು ಪ್ರಥಮ ಸ್ಥಾನ ಪಡೆದ ಶ್ವಾನಗಳನ್ನು ಕೊನೆ ಹಂತ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು. ಸ್ಪರ್ಧೆಯು ಸಹ ಅತ್ಯಂತ ತುರುಸಿನಿಂದ ಕೂಡಿತ್ತು.

ಚಾಂಪಿಯನ್ ಆಪ್ ಚಾಂಪಿಯನ್ ಪಟ್ಟ ಪಡೆದ ಮುಧೋಳ್ ಶ್ವಾನ: ಹಂಪಿ ಉತ್ಸವ-2025ರ ಶ್ವಾನ ಪ್ರದರ್ಶನದಲ್ಲಿ ಗದಗದ ನೀಲಕಂಠ ಅವರ ಮುಧೋಳ್ ತಳಿಗೆ ಸೇರಿದ ಶ್ವಾನ ಚಾಂಪಿಯನ್ ಆಫ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಪ್ರಥಮ ಸ್ಥಾನ ಪಡೆದ ಈ ಶ್ವಾನ ₹10,000 ನಗದು ಪುರಸ್ಕಾರ ಮತ್ತು ಪದಕ ಪಡೆಯಿತು.

ಮರಿಯಮ್ಮನಹಳ್ಳಿಯ ಸತೀಶ್ ಚಿದ್ರಿಯವರ ಡಾಬರ್ ಮನ್ ಶ್ವಾನ ದ್ವಿತೀಯ ಸ್ಥಾನ ಪಡೆಯುವುದರೊಂದಿಗೆ ₹7,500 ನಗದು ಬಹುಮಾನ ಹಾಗೂ ಪದಕಕ್ಕೆ ಪಾತ್ರವಾಯಿತು. ಕೊಟ್ಟೂರಿನ ಕೆ.ಪಿ.ಶಿವಕುಮಾರ್ ಅವರ ಲ್ಯಾಬ್ರಡಾರ್ ಶ್ವಾನ ತೃತೀಯ ಸ್ಥಾನ ಪಡೆದು ₹ 5,000 ನಗದು ಮತ್ತು ಪದಕ ತನ್ನದಾಗಿಸಿಕೊಂಡಿತು. ಶ್ವಾನ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ಚಾಲನೆ ನೀಡಿದರು.

ಬೆಂಗಳೂರು ಪಶು ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಡಾ.ಬಸವರಾಜ್ ಬಾಳಣ್ಣನವರ್, ಹಾಸನ ಪಶು ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಡಾ.ಮಂಜುನಾಥ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

ಮೂಲ ಜಾತಿ ತಳಿ, ದೇಹದಾರ್ಢ್ಯತೆ, ಚುರುಕುತನ, ಚಾತುರ್ಯ ಹಾಗೂ ಮಾಲೀಕರೊಂದಿಗೆ ಅವಿನಾಭಾವ ಸಂಬಂಧದ ಆಧಾರದ ಮೇಲೆ ವಿಜೇತ ಶ್ವಾನಗಳನ್ನು ಆಯ್ಕೆ ಮಾಡಲಾಯಿತು. ಭಾಗವಹಿಸಿದ ಎಲ್ಲಾ ಶ್ವಾನಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಈ ವೇಳೆ ಪಶುಸೇವೆ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಪೋಮ್ ಸಿಂಗ್ ನಾಯ್ಕ್, ಸಹಾಯಕ ನಿರ್ದೇಶಕ ಡಾ.ಆಕ್ತರ್, ಇಲಾಖೆಯ ಇತರೆ ಅಧಿಕಾರಿಗಳಾದ ಡಾ.ಮಲ್ಲಿಕಾರ್ಜುನ, ಡಾ.ಯುಗಂಧರ್ ಮಾನ್ವಿ, ಡಾ.ಸಂತೋಷ್, ಡಾ.ಸತೀಶ್, ಚಿದಾನಂದಪ್ಪ.ಬಿ. ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.