ADVERTISEMENT

ನಕಲಿ ವೈದ್ಯಕೀಯ ದಾಖಲೆ ಸಲ್ಲಿಕೆ: ಹೊಸಪೇಟೆಯದ್ದು 7, ಬೆಂಗಳೂರಿನದ್ದು 10

ಶ್ರವಣದೋಷದ ಮೂಲ ದೃಢೀಕರಣ ಪ್ರಮಾಣಪತ್ರ

ಎಂ.ಜಿ.ಬಾಲಕೃಷ್ಣ
Published 21 ಸೆಪ್ಟೆಂಬರ್ 2025, 6:12 IST
Last Updated 21 ಸೆಪ್ಟೆಂಬರ್ 2025, 6:12 IST
.
.   

ಹೊಸಪೇಟೆ (ವಿಜಯನಗರ): ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ನಕಲಿ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿ, ಅಂಗವಿಕಲ ಕೋಟಾದ ಮೀಸಲಾತಿ ಅಡಿ ಸರ್ಕಾರಿ ವೈದ್ಯಕೀಯ ಸೀಟು ಪಡೆಯಲು ಯತ್ನಿಸಿದ ಪ್ರಕರಣದಲ್ಲಿ ಹಲವು ವೈದ್ಯರ ತಲೆದಂಡವಾಗುವ ಲಕ್ಷಣ ಕಾಣಿಸಿದ್ದು, ಕೆಲವೊಬ್ಬರು ತಲೆಮರೆಸಿಕೊಂಡಿರುವ ಮಾಹಿತಿ ಲಭಿಸಿದೆ.

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ, ಹಿರಿಯ ವೈದ್ಯಾಧಿಕಾರಿಗಳು ಬೆಂಗಳೂರಿನ ಮಲ್ಲೇಶ್ವರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಹೇಳಲಾಗಿದ್ದು, ಆಡಿಯಾಲಾಜಿಸ್ಟ್‌ ಒಬ್ಬರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಅವರಿಗೂ ನೋಟಿಸ್ ಜಾರಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನದೇ ಸಿಂಹಪಾಲು: ಯುಡಿಐಡಿಗಳನ್ನು (ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ) ಪಡೆಯಲು ನಿರ್ದಿಷ್ಟ ಆಸ್ಪತ್ರೆ ಆನ್‌ಲೈನ್‌ನಲ್ಲಿ ಅರ್ಜಿ ಹಾಕಬೇಕು. ಅದಕ್ಕೆ ಮೊದಲಾಗಿ ಅಭ್ಯರ್ಥಿಯ ಅಂಗವೈಕಲ್ಯದ ಕುರಿತಂತೆ ಪ್ರಮಾಣಪತ್ರ ಒದಗಿಸಿರಬೇಕು. ಇಂತಹ ನಕಲಿ ಪ್ರಮಾಣಪತ್ರ ಸಿದ್ಧವಾಗಿರುವುದು ಹೊಸಪೇಟೆ ಮತ್ತು ಬೆಂಗಳೂರಿನಲ್ಲಿ ಎಂಬುದು ಗೊತ್ತಾಗಿದೆ. ಹೊಸಪೇಟೆಯಲ್ಲಿ 7 ಹಾಗೂ ಬೆಂಗಳೂರಿನಲ್ಲಿ 10 ಪ್ರಮಾಣಪತ್ರಗಳು ಸೃಷ್ಟಿಯಾಗಿವೆ. ಅದರ ಆಧಾರದಲ್ಲಿ ಯುಡಿಐಡಿ ಪಡೆಯಲಾಗಿದೆ ಎಂಬುದು ದಾಖಲೆಗಳಿಂದ ತಿಳಿದುಬಂದಿದೆ.

ADVERTISEMENT

ಅಭ್ಯರ್ಥಿಗಳಾದ ಅದ್ಯಾಂತ ಶರಣಯ್ಯ, ಯಶಸ್‌ ಬಿ.ಕೆ., ಪುಷ್ಕರ್, ಸುದರ್ಶನ ಎ., ವಿಜಯ ಮಯೂರ್, ಎ.ಎನ್‌.ಅಪರ್ಣಾ, ಶ್ರದ್ಧಾ ಪಿ.ಕೆ. ಅವರಿಗೆ ಹೊಸಪೇಟೆಯ ಸಾರ್ವಜನಿಕ ಆಸ್ಪತ್ರೆಯಿಂದ ಅಂಗವಿಕಲತೆ ಪರೀಕ್ಷೆಗೆ ಒಳಗಾದ ಮತ್ತು ಮೂಲ ದೃಢೀಕರಣ ಪ್ರಮಾಣಪತ್ರ ನೀಡಲಾಗಿದೆ. ಇತರ ಅಭ್ಯರ್ಥಿಗಳಾದ ಐಮಾನ್, ಕೃಷ್ಣ ಚೈತನ್ಯ ಎಂ., ಚಿನ್ಮಯ್‌ ಟಿ‍‍.ಪಿ.,ಋತ್ವಿಕ್‌ ದೇವಕುಮಾರ್, ಸಾಯಿ ಶಿವಪ್ಪಯ್ಯನಮಠ, ಪ್ರೀತಿ ಪಿ.ಪಾಟೀಲ್‌ ಅವರಿಗೆ ಬೆಂಗಳೂರಿನ ಯಲಹಂತ ಜಿಲ್ಲಾ ಆಸ್ಪತ್ರೆ, ಗೀತಿಕಾ ರಾವ್‌, ರೀತಿಕಾ ಟಿ.ವಿ., ಪ್ರೀತಮ್‌ ಬಿ.,ದರ್ಶನ್‌ ಅವರಿಗೆ ಬೆಂಗಳೂರಿನ ರಾಜೀವ್ ಗಾಂಧಿ ವೈದ್ಯಕೀಯ ಆಸ್ಪತ್ರೆಯಿಂದ ಪ್ರಮಾಣಪತ್ರ ನೀಡಲಾಗಿದೆ.

ಇತರ ಮೂವರು ಅಭ್ಯರ್ಥಿಗಳಾದ ಕೆ.ಭರತ್, ಅಲಿಯಾ ಫಾತಿಮಾ, ಯುಕ್ತಿರಾಜ್‌ ಗೌಡ ಅವರಿಗೆ ಎಲ್ಲಿಂದ ಸಿಕ್ಕಿತು ಎಂಬ ಮಾಹಿತಿ ಇಲ್ಲ. 21ನೇ ಅಭ್ಯರ್ಥಿ ಜಯದೇವ ಡಿ. ಅವರಿಗೆ ಜಿಲ್ಲೆಯ ಯಾವುದೇ ತಾಲ್ಲೂಕು ಆಸ್ಪತ್ರೆಗಳಲ್ಲಿ ಯುಡಿಐಡಿ ವಿತರಿಸಿದ ಮಾಹಿತಿ ಲಭ್ಯವಾಗಿಲ್ಲ ಎಂದು ಡಿಎಚ್‌ಒ ಕಚೇರಿ ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಹಗರಣ ವರದಿಯಾಗಿದೆ ನಾಲ್ಕೈದು ತಿಂಗಳ ಹಿಂದೆಯೇ ಈ ಸಂಚು ನಡೆದಿರುವ ಸಾಧ್ಯತೆ ಇದ್ದು ನಮ್ಮ ಗಮನಕ್ಕೆ ಇದು ಬಂದೇ ಇರಲಿಲ್ಲ
ಡಾ.ಎಲ್‌.ಆರ್.ಶಂಕರ್ ನಾಯ್ಕ್ ಡಿಎಚ್‌ಒ

ವಿಸ್ತರಿಸಿದ ಜಾಲ

ಮೊದಲ ಹಂತದ ಕಾರ್ಯಾಚರಣೆಯಲ್ಲಿ ಬಂಧಿತನಾಗಿರುವ ಬೆಂಗಳೂರಿನ ನಂದಿನಿ ಲೇಔಟ್‌ನ ನಿವಾಸಿ ಶಿಕ್ಷಕ ಭರಮಪ್ಪ ಇಡೀ ಪ್ರಕರಣದ ಕಿಂಗ್‌ಪಿನ್‌ ಎಂದು ಹೇಳಲಾಗುತ್ತಿದ್ದು ಹಲವು ಜಿಲ್ಲೆಗಳಲ್ಲಿ ಆತನ ಜಾಲ ವಿಸ್ತರಿಸಿತ್ತು. ವಿಜಯನಗರ ಜಿಲ್ಲೆಯಲ್ಲಿ ಉಮೇಶ್ ಚೌಧರಿಯ ಸಂಪರ್ಕ ಸಾಧಿಸಿದ್ದ ಆತ ಇಲ್ಲಿನ ಕೆಲವೊಂದು ಲೋಪಗಳನ್ನು ಬಳಸಿಕೊಂಡು ಸುಲಭವಾಗಿ ಯುಡಿಐಡಿ ಮಾಡಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.