
ಹೊಸಪೇಟೆ (ವಿಜಯನಗರ): ಚೌಧರಿ ಚರಣ್ ಸಿಂಗ್ ಅವರ ಜನ್ಮದಿನ ಪ್ರಯುಕ್ತ ಮಂಗಳವಾರ ಇಲ್ಲಿ ರೈತರ ದಿನ ಆಚರಿಸಲಾಗಿದ್ದು, ರೈತರ ಹಿತ ಕಾಯದ ಸರ್ಕಾರಗಳಿಗೆ ತಕ್ಕ ಪಾಠ ನಿಶ್ಚಿತ ಎಂಬ ಸಂದೇಶ ರವಾನಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ವತಿಯಿಂದ ರೈತ ದಿನಾಚರಣೆಯನ್ನು ನಗರದ ಗಾಂಧಿಚೌಕ್‍ನಲ್ಲಿ ಆಚರಿಸಿದ ವೇಳೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ನಾಗರಾಜ್ ಈ ಎಚ್ಚರಿಕೆ ನೀಡಿದರು.
ಸ್ಥಳೀಯ ಸಕ್ಕರೆ ಕಾರ್ಖಾನೆ 8-9 ವರ್ಷಗಳಿಂದ ಮುಚ್ಚಿದ್ದು, ಶಾಸಕರಿಗೆ, ಸಚಿವರಿಗೆ ಮತ್ತು ಮುಖ್ಯಮಂತ್ರಿಯವರಿಗೂ ಬಹಳಷ್ಟು ಬಾರಿ ಮನವಿ ಪತ್ರ ಸಲ್ಲಿಸಿದರು ಸಹ ಇಲ್ಲಿಯವರೆಗೂ ಯಾವುದೇ ಪ್ರಯೋಜನೆ ಆಗಿಲ್ಲ. ಈ ಭಾಗದ ರೈತರು ಟನ್ ಕಬ್ಬಿಗೆ ₹ 800ರಿಂದ ₹1,000 ನಷ್ಟ ಅನುಭವಿಸುತ್ತಿದ್ದಾರೆ ಎಂದರು.
ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ಮಾತನಾಡಿ, ರೈತರ ಕಷ್ಟಗಳಿಗೆ ತಾಲ್ಲೂಕು ಆಡಳಿತ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದರು. ಹಳೆ ತಂತಿಗಳನ್ನು ಬದಲಿಸುವಲ್ಲಿ ಜೆಸ್ಕಾಂ ಸಹ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ದೂರಿದರು.
ಜಿಲ್ಲಾ ಕಾರ್ಯಧ್ಯಕ್ಷ ಎಂ.ಜಡಿಯಪ್ಪ ಮಾತನಾಡಿ, ರೈತರಿಗೆ ಸಮರ್ಪಕ ಮಾಹಿತಿ ನೀಡುವ ಕೆಲಸವನ್ನು ಕೃಷಿ, ತೋಟಗಾರಿಕೆ ಇಲಾಖೆ ಮಾಡಬೇಕು ಎಂದರು.
ರೈತರಿಗೆ ಬೇಕಾಗುವ ಸೌಲಭ್ಯಗಳನ್ನು ಪಡೆಯುವ ಸಂದರ್ಭದಲ್ಲಿ ನಮ್ಮ ಕಚೇರಿಗೆ ನೇರವಾಗಿ ಆಗಮಿಸಿ ಸೌಲಭ್ಯಗಳ ಮಾಹಿತಿ ಪಡೆದು ತಮ್ಮ ಕುಂದು ಕೊರತೆ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಭರವಸೆ ನೀಡಿದರು. ಹಳೆ ತಂತಿ ಬದಲಿಸುವ ಕೆಲಸ ಶೀಘ್ರ ನಡೆಯಲಿದೆ ಎಂದು ಜೆಸ್ಕಾಂ ಇಇ ಹೇಳಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಖಾಜಾ ನಿಯಾಜ್, ಜಹಿರುದ್ದೀನ್, ಆರ್.ಆರ್.ತಾಯಪ್ಪ, ವಿ.ಗಾಳೆಪ್ಪ, ಅಂಕ್ಲೇಶ್, ಬಸವರಾಜ, ಸುರೇಶ, ವೀರೇಶ್, ರಾಮಾಂಜಿನಿ, ಪಿ.ಕೆ.ಹಳ್ಳಿ ರಾಜಶೇಖರ, ಭುವನಹಳ್ಳಿ ಗೋವಿಂದಪ್ಪ ಇತರರು ಇದ್ದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ (ವಾಸುದೇವ ಮೇಟಿ ಬಣ) ವತಿಯಿಂದ ಮೂರನೇ ವರ್ಷದ ರೈತರ ಹಬ್ಬವನ್ನು ಡಿ.29ರಂದು ನಗರದಲ್ಲಿ ಆಚರಿಸಲಾಗುವುದು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎ.ಗಾಳೆಪ್ಪ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಡಕರಾಯ ದೇವಸ್ಥಾನದಿಂದ ಭವ್ಯ ಮೆರವಣಿಗೆ ನಡೆದು ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಸುಗಮ ಸಂಗೀತ ಯೋಗ ನೃತ್ಯ ಭರತನಾಟ್ಯ ಕಾರ್ಯಕ್ರಮಗಳಿವೆ. ಸಕ್ಕರೆ ಕಾರ್ಖಾನೆ ಸಹಿತ ರೈತರ ಹಲವು ಹಕ್ಕೊತ್ತಾಯಗಳನ್ನು ಆ ಸಂದರ್ಭದಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.