ADVERTISEMENT

ಹಗರಿಬೊಮ್ಮನಹಳ್ಳಿ | ಜನ ಜಾನುವಾರುಗಳ ಸಹಿತ ಊರಿಗೆ ಊರೇ ಖಾಲಿ!

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 4:34 IST
Last Updated 8 ಫೆಬ್ರುವರಿ 2026, 4:34 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹರೇಗೊಂಡನಹಳ್ಳಿ ಗ್ರಾಮದಲ್ಲಿ ಗುಳೇ ಲಕ್ಕಮ್ಮ ಜಾತ್ರೆ ಅಂಗವಾಗಿ ಗ್ರಾಮಸ್ಥರು ಊರು ತೊರೆದರು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹರೇಗೊಂಡನಹಳ್ಳಿ ಗ್ರಾಮದಲ್ಲಿ ಗುಳೇ ಲಕ್ಕಮ್ಮ ಜಾತ್ರೆ ಅಂಗವಾಗಿ ಗ್ರಾಮಸ್ಥರು ಊರು ತೊರೆದರು   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಹರೇಗೊಂಡನಹಳ್ಳಿ ಗ್ರಾಮದಲ್ಲಿ ಶನಿವಾರ ಗುಳೇ ಲಕ್ಕಮ್ಮನ ಜಾತ್ರೆ ನಡೆದಿದ್ದು, ಅದರ ಅಂಗವಾಗಿ ಗ್ರಾಮಸ್ಥರೆಲ್ಲಾ ಎತ್ತಿನಬಂಡಿಗಳಲ್ಲಿ, ಟ್ರಾಕ್ಟರ್‌ಗಳಲ್ಲಿ, ಸರಕು ಸಾಗಣೆ ವಾಹನಗಳಲ್ಲಿ ಗ್ರಾಮ ತೊರೆದು ಹೊರ ವಲಯದಲ್ಲಿ ಬೀಡುಬಿಟ್ಟರು.

ಗ್ರಾಮಸ್ಥರು ಸಂಪ್ರದಾಯದಂತೆ ಊರು ತೊರೆದಿದ್ದರೇ ಹೊರತು ಅವರ ಮನದಲ್ಲಿ ಜಾತ್ರೋತ್ಸವದ ಸಂಭ್ರಮವಿತ್ತು. ತಮ್ಮ ಜತೆಗೆ ದನ, ಕರು, ನಾಯಿ, ಕೋಳಿ, ಕುರಿಗಳನ್ನೂ ಕರೆತಂದಿದ್ದರು. ಬೆಳಗಿನಿಂದ ಸಂಜೆಯವರೆಗೂ ಹೊರವಲಯದ ಜಮೀನುಗಳಲ್ಲಿ ಜನ ಉಳಿದುಕೊಂಡರು.

ಸಂಪ್ರದಾಯದಂತೆ ಬೆಳಗಿನ ಜಾವ ಗ್ರಾಮದ ತಳವಾರ ಹನುಮೇಶಪ್ಪ ಅವರ ಮನೆಯಲ್ಲಿ ಬೀಸುವ ಕಲ್ಲಿನಿಂದ ಸಜ್ಜೆ ಮತ್ತು ಕಡಲೆಬೇಳೆ ಬೀಸಿ ಅದರ ಹಿಟ್ಟನ್ನು ಮಣ್ಣಿನ ಪಾತ್ರೆಯಲ್ಲಿ ಮಿಶ್ರಣ ಮಾಡಿ 2.9 ಅಡಿ ಎತ್ತರದ ಗುಳೇ ಲಕ್ಕಮ್ಮ ಮೂರ್ತಿಯನ್ನು ನಿರ್ಮಿಸಿ ಪೂಜೆ ಸಲ್ಲಿಸಲಾಯಿತು. ಎಲ್ಲ ಧಾರ್ಮಿಕ ಕೈಂಕರ್ಯಗಳು ನಡೆದ ಬಳಿಕ ಮೆರವಣಿಗೆ ಮೂಲಕ ಗ್ರಾಮದ ಹೊರಗಿನ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲು ಬಿದಿರಿನ ಪುಟ್ಟಿಯಲ್ಲಿ ಹೊತ್ತಯ್ಯಲಾಯಿತು. ಗ್ರಾಮದ ನೂರಾರು ಜನ ದೀಡ್ ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸಿದರು.

ADVERTISEMENT

ಗ್ರಾಮದ ಮುಖಂಡರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಗಂಗೆಪೂಜೆಯೊಂದಿಗೆ ಆರಂಭವಾದ ಧಾರ್ಮಿಕ ಕಾರ್ಯಕ್ರಮಗಳು ಡೊಳ್ಳು, ಉರುಮೆ ವಾದ್ಯಗಳೊಂದಿಗೆ ಗ್ರಾಮದ ಹೊರಗೆ ಇರುವ ದೇವಸ್ಥಾನದವರೆಗೂ ಮೆರವಣಿಗೆ ನಡೆಸಲಾಯಿತು.

ಸಂಜೆ ಆಗುತ್ತಿದ್ದಂತೆಯೇ ಚರಗ ಚೆಲ್ಲಿದ ಬಳಿಕ ಎಲ್ಲರೂ ಗ್ರಾಮದ ಅಗಸಿ ಬಾಗಿಲಿನಲ್ಲಿ ಹಾಕಿದ ಬೆಂಕಿ ಕೆಂಡದಿಂದ ಪ್ರತಿ ಮನೆಯಲ್ಲೂ ದೀಪ ಬೆಳಗಿಸುತ್ತಾರೆ ಎಂದು ಗ್ರಾಮದ ಮುಖಂಡರಾದ ಕರಿಬಸಪ್ಪ, ಭೀಮಪ್ಪ, ಕರಿಯಪ್ಪ ತಿಳಿಸಿದರು.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹರೇಗೊಂಡನಹಳ್ಳಿ ಗ್ರಾಮ ಶನಿವಾರ ಜನರಿಲ್ಲದೆ ಬಿಕೋ ಎಂದಿತು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹರೇಗೊಂಡನಹಳ್ಳಿ ಗ್ರಮದ ಹೊರವಲಯದಲ್ಲಿ ಗುಳೇ ಹೋಗಿರುವ ಗ್ರಾಮಸ್ಥರು ಟೆಂಟ್‍ಗಳನ್ನು ಹಾಕಿಕೊಂಡಿರುವುದು

ಬುತ್ತಿಗಂಟುಗಳನ್ನು ತಲೆ ಮೇಲಿಟ್ಟು ಸಾಗಿದ  ಮಹಿಳೆಯರು ಜಾನುವಾರುಗಳನ್ನು ಕರೆತಂದ ಪುರುಷರು ಸಸ್ಯಾಹಾರಿ ಊಟದ ಸವಿ, ನೆಂಟರಿಷ್ಟರ ಕುಶಲೋಪರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.