ADVERTISEMENT

ಹಗರಿಬೊಮ್ಮನಹಳ್ಳಿ: ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 4:31 IST
Last Updated 4 ಜುಲೈ 2022, 4:31 IST
ತಾಯಿ ಮಡಿಲಲ್ಲಿ‌ ಬಾಲಕ ಅದ್ವಿಕ್, ಪಿಎಸ್ ಐ ಸರಳಾ ಇದ್ದಾರೆ
ತಾಯಿ ಮಡಿಲಲ್ಲಿ‌ ಬಾಲಕ ಅದ್ವಿಕ್, ಪಿಎಸ್ ಐ ಸರಳಾ ಇದ್ದಾರೆ   

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಪಟ್ಟಣದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದ ಬಾಲಕನ ಅಪಹರಣ ಪ್ರಕರಣ ಭಾನುವಾರ ರಾತ್ರಿ ಸುಖಾಂತ್ಯ ಕಂಡಿದೆ.

ಪಟ್ಟಣದ ಹಳೆ ಊರಿನ ನೀರಾವರಿ ಇಲಾಖೆಯ ಆವರಣದಲ್ಲಿ ಆಟ ಆಡುತ್ತಿದ್ದ ಐದು ವರ್ಷದ ಅದ್ವಿಕ್‍ನನ್ನು ಭಾನುವಾರ ಅಪಹರಿಸಲಾಗಿತ್ತು. ಬಾಲಕನ ತಂದೆ ಈ.ರಾಘವೇಂದ್ರ ಅವರಿಗೆ ಕರೆ ಮಾಡಿ ₹3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪೋಷಕರು ಈ ವಿಷಯ ಪೊಲೀಸರ ಗಮನಕ್ಕೆ ತಂದರು.

ಕೂಡಲೇ ಕಾರ್ಯಪ್ರವೃತ್ತರಾದ ಡಿವೈಎಸ್‍ಪಿ ಹರೀಶ್, ಸಿಪಿಐ ಟಿ.ಮಂಜಣ್ಣ, ಪಿಎಸ್‍ಐ ಪಿ.ಸರಳಾ ಅವರು ಸಿಬ್ಬಂದಿಯೊಂದಿಗೆ ತೆರಳಿ ಬಾಲಕನ ರಕ್ಷಿಸಿದ್ದಾರೆ.

ADVERTISEMENT

ಅಪಹರಣಕಾರರು ಮೋರಿಗೇರಿ ಕ್ರಾಸ್ ನ ಉಲವತ್ತಿ ಗ್ರಾಮದ ಮಣ್ಣಿನ ರಸ್ತೆಯಲ್ಲಿ ಬಾಲಕನ ಸಮೇತ ಅಡಗಿ ಕುಳಿತ್ತಿದ್ದರು. ಬಾಲಕನ ತಂದೆ ರಾಘವೇಂದ್ರ ಅವರು ಪತ್ನಿಯೊಂದಿಗೆ ಹಣದ ಸಮೇತ ತೆರಳಿದ್ದರು. ಅವರೊಂದಿಗೆ ಪೊಲೀಸರು ಗ್ರಾಮೀಣರಂತೆ ವೇಷ ಮರೆಸಿಕೊಂಡು ಹಿಂಬಾಲಿಸಿ, ಸುತ್ತುವರೆದಿದ್ದರು. ಇಬ್ಬರು ಪೊಲೀಸರು, ಕುಡುಕರಂತೆ ನಟಿಸುತ್ತ ಅಪಹರಣಕಾರರ ಬಳಿ ತೆರಳುತ್ತಿದ್ದಂತೆ ಬಾಲಕ ಮತ್ತು ಬೈಕ್ ಬಿಟ್ಟು ಪರಾರಿಯಾದರು. ಅಪಹರಣಕಾರರು ದೂರವಾಣಿ ಕರೆ ಮಾಡಿದ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.
ಅಪಹರಣಕಾರರನ್ನು ಶೀಘ್ರವೇ ಪತ್ತೆ ಹಚ್ಚಲಾಗುವುದು. ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದರು.

ತಡರಾತ್ರಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.