
ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣ ಹಂಪಿಯನ್ನು ಹೆಲಿಕಾಪ್ಟರ್ ಮೂಲಕ ಆಗಸದಿಂದ ತೋರಿಸುವ ‘ಹಂಪಿ ಬೈ ಸ್ಕೈ’ಗೆ ಈ ಬಾರಿ ₹3,500 ದರ ನಿಗದಿಪಡಿಸಲಾಗಿದೆ. ಬೆಳಿಗ್ಗೆ 9ರಿಂದ 11ರವರೆಗೆ ಈ ದರ ₹3,000 ಇರಲಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ಸೋಮವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಹೆಲಿಕಾಪ್ಟರ್‌ಗಳು ಸೇವೆ ನೀಡಲಿವೆ, ಫೆ.12ರ ಬೆಳಿಗ್ಗೆಯಿಂದಲೇ ಹಾರಾಟ ಆರಂಭವಾಗಲಿದೆ ಎಂದರು.
ಈ ಬಾರಿ ಸಹ ಐದು ವೇದಿಕೆಗಳಲ್ಲಿ ಹಾಗೂ ಆನೆಲಾಯ ಪ್ರದೇಶದಲ್ಲಿ ಧ್ವನಿ ಬೆಳಕು ಕಾರ್ಯಕ್ರಮ ನಡೆಯಲಿದೆ. ಪ್ರಧಾನ ವೇದಿಕೆಗೆ ಎಂ.ಪಿ.ಪ್ರಕಾಶ್ ಅವರ ಹೆಸರನ್ನೇ ಇರಿಸಲಾಗುತ್ತದೆ. ಉಳಿದ ವೇದಿಕೆಗಳಿಗೆ ಜನರ ಬೇಡಿಕೆಗೆ ಸ್ಪಂದಿಸಿ ಎದುರು ಬಸವಣ್ಣ ವೇದಿಕೆಗೆ ಶ್ರೀಕೃಷ್ಣದೇವರಾಯ ವೇದಿಕೆ ಎಂದು, ಮಹಾನವಮಿ ದಿಬ್ಬ ವೇದಿಕೆಗೆ ವಿದ್ಯಾರಣ್ಯ ವೇದಿಕೆ ಹಾಗೂ ಆನೆಲಾಯ ವೇದಿಕೆಗೆ ಹಕ್ಕ ಬುಕ್ಕ ವೇದಿಕೆಗಳೆಂದು ಹೆಸರು ಇಡಲಾಗಿದೆ, ಹಳೆಯ ಹೆಸರಿನ ಜತೆಗೆ ಹೊಸ ಹೆಸರು ಸಹ ಇರುತ್ತದೆ ಎಂದರು.
ವಾಹನ ನಿಲುಗಡೆಗೆ ಈ ಬಾರಿ ಸಮಸ್ಯೆ ಆಗುವುದಿಲ್ಲ, ಏಕೆಂದರೆ 20 ಎಕರೆಗೂ ಅಧಿಕ ಕೃಷಿ ಜಮೀನನ್ನು ವಾಹನ ನಿಲುಗಡೆಗಾಗಿಯೇ ಮೀಸಲಿಡಲಾಗಿದೆ. ಹೆಚ್ಚಿನ ವಾಹನಗಳು ಮುಖ್ಯ ವೇದಿಕೆ ಬಳಿ ಬರುವುದಕ್ಕೆ ಅವಕಾಶ ಇದೆ. ಆದರೆ ಉತ್ಸವದ ಸಮಯದಲ್ಲಿ ಕಡ್ಡಿರಾಂಪುರದಿಂದ ಏಕಮುಖ ಸಂಚಾರ ಇರುತ್ತದೆ ಎಂದು ಮಾಹಿತಿ ನೀಡಿದರು.
ಪ್ರಧಾನ ವೇದಿಕೆ ಸಹಿತ ಮೂರೂ ವೇದಿಕೆಗಳಲ್ಲಿ (ಎದುರು ಬಸವಣ್ಣ, ವಿರೂಪಾಕ್ಷ ದೇವಸ್ಥಾನ) ಸೆಲೆಬ್ರಿಟಿಗಳ ಕಾರ್ಯಕ್ರಮ ಇರುವುದರಿಂದ ಈ ಬಾರಿ ಜನರಿಗೆ ಇತರ ವೇದಿಕೆಗಳತ್ತ ಹೋಗಿ ಕಾರ್ಯಕ್ರಮ ನೋಡುವ ಅವಕಾಶ ಹೆಚ್ಚಾಗಿದೆ. ಈ ಬಾರಿ ವಿದ್ಯುತ್ ದೀಪಾಲಂಕಾರವನ್ನು ಸಹ ಹೆಚ್ಚಿನ ಪ್ರಮಾಣದಲ್ಲಿ ಮಾಡಲಾಗಿದೆ, ಇದು ಸಹಜವಾಗಿಯೇ ಹಂಪಿಯತ್ತ ಜನ ಆಕರ್ಷಣೆಗೊಳ್ಳುವಂತೆ ಮಾಡುತ್ತಿದೆ ಎಂದರು.
ವಿದ್ಯುತ್ ದೀಪ ಕದಿಯಬೇಡಿ: ‘ಕೆಲವೆಡೆ ವಿದ್ಯುತ್ ಅಲಂಕಾರಗಳನ್ನು ಕಳವು ಮಾಡುತ್ತಿರುವ ಕುರಿತು ದೂರು ಕೇಳಿಬಂದಿದೆ. ಇದು ನಿಮ್ಮ ಕಾರ್ಯಕ್ರಮ, ಯಾರೂ ಈ ರೀತಿಯ ಕೃತ್ಯಕ್ಕೆ ಕೈಹಚ್ಚಬಾರದು, ಇದರಿಂದ ಕಾರ್ಯಕ್ರಮಕ್ಕೆ ಧಕ್ಕೆ ಉಂಟಾಗುತ್ತದೆ’ ಎಂದರು.
ಎಸ್‌ಪಿ ಎಸ್.ಜಾಹ್ನವಿ, ಜಿಲ್ಲಾ ಪಂಚಾಯಿತಿ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣವರ ಇದ್ದರು.
ಶಾಸಕ ಎಚ್.ಆರ್.ಗವಿಯಪ್ಪ ಅವರು ಅಧಿವೇಶನ ಇತರ ಕೆಲಸಗಳಲ್ಲಿ ಬ್ಯುಸಿ ಇದ್ದರು. ಆದರೆ ನಿರಂತರ ಸಂಪರ್ಕದಲ್ಲಿದ್ದು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅವರಿಂದ ಈ ಬಾರಿಯೂ ಅನ್ನದಾಸೋಹ ನಡೆಯಲಿದೆಯೇ ಕೇಳಲಿದ್ದೇವೆಕವಿತಾ ಎಸ್. ಮನ್ನಿಕೇರಿ ಜಿಲ್ಲಾಧಿಕಾರಿ
10 ವೀಕ್ಷಣಾ ಗೋಪುರ
ಹಂಪಿ ಉತ್ಸವದ ವೇಳೆ ವಿಶೇಷವಾಗಿ ಮಹಿಳೆಯುರು ಮಕ್ಕಳ ಸುರಕ್ಷತೆಗೆ ‘ವುಮೆನ್ ಐಲ್ಯಾಂಡ್’ ಸ್ಥಾಪಿಸಿ ತಕ್ಷಣ ಸ್ಪಂದಿಸುವ ವ್ಯವಸ್ಥೆ ಮಾಡಲಾಗುವುದು. ಒಟ್ಟು 10 ವೀಕ್ಷಣಾ ಗೋಪುರಗಳನ್ನು ಸ್ಥಾಪಿಸಲಾಗುವುದು 250 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಕಮಾಂಡ್ ಸೆಂಟರ್ ಮೂಲಕ ಎಲ್ಲವನ್ನೂ ಪರಿಶೀಲನೆ ನಡೆಸಲಾಗುವುದು. 1500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯಿಂದ ಹಾಗೂ 800ರಷ್ಟು ಗೃಹರಕ್ಷಕದಳದವರಿಂದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಎಸ್‌ಪಿ ಎಸ್.ಜಾಹ್ನವಿ ಹೇಳಿದರು.
Cut-off box - 1 ಎಕರೆ ಜಮೀನಿನಲ್ಲಿ 1000 ಡ್ರೋನ್ ಮುಖ್ಯ ವೇದಿಕೆ ಎಂ.ಪಿ.ಪ್ರಕಾಶ ವೇದಿಕೆ ಬಳಿಯಲ್ಲೇ ಡ್ರೋನ್ ಶೋ ನಡೆಯಲಿದೆ. ಶೀಘ್ರ 1000 ಡ್ರೋನ್‌ಗಳು ಬರಲಿದ್ದು ಅವುಗಳನ್ನು ಹೊಂದಿಸಿ ಇಡಲು 1 ಎಕರೆ ಜಮೀನನ್ನು ಮುಖ್ಯ ವೇದಿಕೆ ಸಮೀಪದಲ್ಲೇ ಮೀಸಲಿಡಲಾಗಿದೆ. ಈ ಬಾರಿಯ ಹಂಪಿ ಉತ್ಸವಕ್ಕೆ ಇದು ಪ್ರಮುಖ ಆಕರ್ಷಣೆಯಾಗಲಿದೆ ಎಂದು ಡಿ.ಸಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.