ಹೊಸಪೇಟೆ (ವಿಜಯನಗರ): ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸ್ವತಂತ್ರವಾಗಿ ಕೆಲಸ ನಿರ್ವಹಿಸುತ್ತಿದ್ದು, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಡಿ ಬರುತ್ತದೆ, ಆದರೆ ಅದೆಷ್ಟೋ ಸಂದರ್ಭಗಳಲ್ಲಿ ಕೇಂದ್ರದ ಮಾತನ್ನೂ ಕೇಳುತ್ತಿಲ್ಲ, ಹೀಗಾಗಿ ಹಂಪಿ ಸಹಿತ ರಾಜ್ಯದ ಹಲವೆಡೆ ಸ್ಮಾರಕಗಳ ರಕ್ಷಣೆ, ಮೂಲಸೌಲಭ್ಯ ಅಭಿವೃದ್ಧಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ ಎಂಬುದನ್ನು ಬಿಜೆಪಿ ಒಪ್ಪಿಕೊಂಡಿದೆ.
ಗುರುವಾರ ಇಲ್ಲಿ ಮೋದಿ ಸರ್ಕಾರದ 11 ವರ್ಷಗಳ ಸಾಧನೆ ಕುರಿತಂತೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಕುಮಾರ್ ಈ ವಿಷಯ ತಿಳಿಸಿದರು ಹಾಗೂ ಅಗತ್ಯದ ಕೆಲಸಗಳನ್ನು ಎಎಸ್‌ಐ ಕಡೆಯಿಂದ ಮಾಡಿಸುವ ಭರವಸೆ ನೀಡಿದರು.
‘ಹಂಪಿಯಲ್ಲಿ ಮಾತ್ರವಲ್ಲ, ಚಿತ್ರದುರ್ಗ, ಇತರೆಡೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಒಂದು ಶೌಚಾಲಯ ನಿರ್ಮಿಸಿಕೊಡಿ ಎಂದರೆ ಬೇಗನೆ ಮಾಡಿಸಲು ಸಾಧ್ಯವಾಗುತ್ತಿಲ್ಲ. ಎಎಸ್‌ಐನವರು ಯಾರ ಮಾತೂ ಕೇಳುತ್ತಿಲ್ಲ ಎಂಬ ಸ್ಥಿತಿ ಇದೆ. ನರೇಂದ್ರ ಮೋದಿ ಅವರು ಹಲವಾರು ಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆ ಮಾಡಿದ್ದಾರೆ, ಆದರೆ ಇಂತಹ ವಿಷಯಗಳಲ್ಲಿ ಅವರು ಹಿನ್ನಡೆ ಕಂಡಂತೆ ಕಾಣಿಸುತ್ತಿದೆ, ಈ ಲೋಪವನ್ನು ಸರಿಪಡಿಸಲು ಖಂಡಿತ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಯತ್ನ ನಡೆಯಲಿದೆ’ ಎಂದರು.
ಪ್ರಧಾನಿ ಮೋದಿ ಪತ್ರಿಕಾಗೋಷ್ಠಿಗಳನ್ನು ನಡೆಸದೆ ಇರುವುದಕ್ಕೂ, ಅಭಿವೃದ್ಧಿಗೂ ಸಂಬಂಧ ಕಲ್ಪಿಸುವ ಅಗತ್ಯವಿಲ್ಲ. ಮಾತು ಕಡಿಮೆ, ದುಡಿಮೆ ಹೆಚ್ಚು ಎಂಬುದು ಪ್ರಧಾನಿ ಅವರ ಧೋರಣೆ, ಆದರೂ ಸಂಸತ್ ಕಲಾಪ ನಡೆಯುವುದಕ್ಕೆ ಮೊದಲಾಗಿ ಪತ್ರಕರ್ತರೊಂದಿಗೆ ಮಾತನಾಡುತ್ತಾರೆ, ಹಲವು ಮಾಧ್ಯಮ ಸಂವಾದಗಳನ್ನೂ ನಡೆಸಿದ್ದಾರೆ ಎಂದು ನವೀನ್ ಕುಮಾರ್ ಸಮರ್ಥಿಸಿಕೊಂಡರು.
2004–14ರ ಯುಪಿಎ ಮತ್ತು 2014–24ರ ಎನ್‌ಡಿಎ ಸರ್ಕಾರಗಳ ಸಾಧನೆ ಅಜಗಜಾಂತರ. ಉದ್ಯೋಗ ಸೃಷ್ಟಿ 2 ಕೋಟಿಯಿಂದ 17 ಕೋಟಿಗೆ ಹೆಚ್ಚಳವಾಗಿದೆ, ಹಣದುಬ್ಬರ ಶೇ 8.2ರಿಂದ ಶೇ 5ಕ್ಕೆ ಇಳಿಕೆಯಾಗಿದೆ. ಕಡುಬಡವರ ಪ್ರಮಾಣ ಶೇ 29.2ರಿಂದ ಶೇ 11.3ಕ್ಕೆ ಕುಸಿದಿದೆ. ಆದಾಯ ತೆರಿಗೆ ಪಾವತಿದಾರರ ಸಂಖ್ಯೆ 3.9 ಕೋಟಿಯಿಂದ 9.2 ಕೋಟಿಗೆ ಹೆಚ್ಚಳವಾಗಿದೆ ಎಂದು ಅವರು ವಿವರಿಸಿದರು.
ಯುಪಿಎ ಮ್ತು ಎನ್‌ಡಿಯ ಅವಧಿಯಲ್ಲಿ ರಾಜ್ಯಕ್ಕೆ ಕೇಂದ್ರದಿಂದ ದೊರೆತ ಆರ್ಥಿಕ ಕೊಡುಗೆ ವಿಚಾರದಲ್ಲಿ ಭಾರಿ ವ್ಯತ್ಯಾಸ ಇದೆ. ಒಟ್ಟು ಆರ್ಥಿಕ ವಿಕೇಂದ್ರೀಕರಣ 1,44 ಲಕ್ಷ ಕೋಟಿ ಇದ್ದುದು 5.42 ಲಕ್ಷ ಕೋಟಿಗೆ (ಶೇ 275) ಏರಿಕೆಯಾಗಿದೆ. ಅಭಿವೃದ್ಧಿ ಯೋಜನೆಗಳಿಗೆ ಆರ್ಥಿಕ ಕೊಡುಗೆ ₹5,390 ಕೋಟಿಯಿಂದ ₹14,685 ಕೋಟಿಗೆ (ಶೇ 172) ಹೆಚ್ಚಳವಾಗಿದೆ. ರೈಲ್ವೆಗೆ ಸರಾಸರಿ ವಾರ್ಷಿಕ ಹಂಚಿಕೆ ₹835 ಕೋಟಿಯಿಂದ (2009–14) ₹5,111 ಕೋಟಿಗೆ (ಶೇ 512) ನೆಗೆತ ಕಂಡಿದೆ. ಕೇಂದ್ರ ಪ್ರಾಯೋಜಿತ ಯೋಜನೆಗಳು ₹39,922 ಕೋಟಿಯಿಂದ ₹1.03 ಲಕ್ಷ ಕೋಟಿಗೆ (ಶೇ 159) ಏರಿಕೆ ಕಂಡಿದೆ ಎಂದು ಎಂಎಲ್‌ಸಿ ಮಾಹಿತಿ ನೀಡಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸಂಜೀವ ರೆಡ್ಡಿ, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಕೆ.ಎಸ್.ರಾಘವೇಂದ್ರ, ಓದೋ ಗಂಗಪ್ಪ, ಸೂರ್ಯ ಪಾಪಣ್ಣ, ಓಂಕಾರ ಗೌಡ, ಶಂಕರ್ ಮೇಟಿ, ಸಾಲಿ ಸಿದ್ದಯ್ಯ ಸ್ವಾಮಿ, ಹೊನ್ನೂರಪ್ಪ ಮಧುಸೂದನ್ ಇತರರು ಇದ್ದರು.
ವಿಜಯಮಲ್ಯ ಆಗಲಿ, ನೀರವ್ ಮೋದಿ ಆಗಲಿ, ಯಾವ ಶ್ರೀಮಂತರ ಸಾಲವನ್ನೂ ಮನ್ನಾ ಮಾಡಲಾಗಿಲ್ಲ. ಅದೆಲ್ಲದಕ್ಕೂ ದಾಖಲೆಗಳಿವೆ, ಸಾಲ ಮರುಪಾವತಿ ಮಾಡಿದ್ದಾಗಿ ಸ್ವತಃ ವಿಜಯಮಲ್ಯ ಅವರೇ ಹೇಳಿದ್ದಾರೆ ಎಂದ ನವೀನ್ ಕುಮಾರ್, ಮೋದಿ ಸರ್ಕಾರದ ಅವಧಿಯಲ್ಲಿ ದೇಶ ಸರ್ವಾಂಗೀಣ ಪ್ರಗತಿ ಕಂಡಿದೆ, ಹೆದ್ದಾರಿ, ರೈಲ್ವೆ ಅಭಿವೃದ್ಧಿ, ವಿದೇಶಿ ಹೂಡಿಕೆ,ಮಹಿಳಾ ಸಬಲೀಕರಣ ಸಹಿತ ಎಲ್ಲಾ ಕ್ಷೇತ್ರಗಳಲ್ಲೂ ಅಭೂತಪೂರ್ವ ಪ್ರಗತಿ ಸಾಧಿಸಲಾಗಿದೆ ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.