ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ ಅಗತ್ಯದ ಅನುದಾನ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಸೇನೆ ಸೋಮವಾರ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆ ನಡೆದಿಲ್ಲ. ಈ ಮೂಲಕ ಈ ಬೇಡಿಕೆಗೆ ಸ್ಥಳೀಯ ಜನರು, ಸಂಘಟನೆಗಳ ಬೆಂಬಲ ಇಲ್ಲದಿರುವುದು ದೃಢಪಟ್ಟಿದೆ.
ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಭೀಮಾಶಂಕರ ಪಾಟೀಲ್ ಅವರು ಡಿ.1ರಂದು ಇಲ್ಲಿ ಪತ್ರಿಕಾಗೋಷ್ಠಿ ನಡೆಸಿ ಡಿ.10ರಂದು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದರು. ಒಂದಿಬ್ಬರು ಸಾಹಿತಿಗಳು ಅಲಭ್ಯರಿದ್ದ ಕಾರಣ ಡಿ.10ರ ಪ್ರತಿಭಟನೆಯನ್ನು ಡಿ.16ಕ್ಕೆ ಮುಂದೂಡಿದ್ದಾಗಿ ವಾರದ ಬಳಿಕ ತಿಳಿಸಿದ್ದರು. ಆದರೆ ಸೋಮವಾರ ಯಾವುದೇ ಪ್ರತಿಭಟನೆ ನಡೆಯಲಿಲ್ಲ.
ವಿಶ್ವವಿದ್ಯಾಲಯದಲ್ಲಿ ಈ ಹಿಂದಿನ ಇಬ್ಬರು ಕುಲಪತಿಗಳ ಅವಧಿಯಲ್ಲೂ ಭಾರಿ ಪ್ರಮಾಣದ ಹಣ ದುರುಪಯೋಗ ಮಾಡಿದ ಆರೋಪ ಇತ್ತು. ಅದರ ಕುರಿತಂತೆ ತನಿಖೆ ಸಹ ನಡೆಯುತ್ತಿದೆ. ಅನಗತ್ಯ ಉದ್ದೇಶಗಳಿಗೆ ಹಣ ವೆಚ್ಚ ಮಾಡಿ, ಅಗತ್ಯದ ತಾತ್ಕಾಲಿಕ ಸಿಬ್ಬಂದಿಗೆ ಸಂಬಳ, ವಿದ್ಯುತ್ ಬಿಲ್ ನೀಡಲು ಕೈ ಖಾಲಿ ಮಾಡಿಕೊಂಡ ಹಲವು ನಿದರ್ಶನಗಳು ಇಲ್ಲಿ ನಡೆದಿವೆ. ಮಹಾಲೇಖಪಾಲರು ಇದೆಲ್ಲವನ್ನೂ ಗಮನಿಸಿ ಸರ್ಕಾರಕ್ಕೆ ವರದಿಯನ್ನೂ ನೀಡಿದ್ದರು. ಹೀಗಾಗಿ ಸ್ಥಳೀಯ ಸಂಘಟನೆಗಳಿಗೂ ಇದೆಲ್ಲ ಮಾಹಿತಿ ಇರುವ ಕಾರಣ ಅನುದಾನಕ್ಕಾಗಿ ಹೋರಾಟ ನಡೆಸುವ ಪ್ರಸ್ತಾವಕ್ಕೆ ಯಾರೂ ಬೆಂಬಲ ನೀಡಿಲ್ಲ ಎಂದು ಹೇಳಲಾಗಿದೆ.
ನಿಷ್ಕ್ರಿಯ ಸೇನೆ ಸಕ್ರಿಯ ಪ್ರಯತ್ನ: ಕರ್ನಾಟಕ ನವನಿರ್ಮಾಣ ಸೇನೆಯ ಚಟುವಟಿಕೆ ವಿಜಯನಗರ ಜಿಲ್ಲೆಯಲ್ಲಿ ಇರಲೇ ಇಲ್ಲ ಎಂಬಷ್ಟು ಅದು ನಿಷ್ಕ್ರಿಯವಾಗಿತ್ತು. ‘ಇನ್ನು ಮುಂದೆ ನಾವು ಜಿಲ್ಲೆಯಲ್ಲಿ ಸಕ್ರಿಯರಾಗಲಿದ್ದೇವೆ’ ಎಂದು ಭೀಮಾಶಂಕರ ಪಾಟೀಲ್ ಭರವಸೆ ನೀಡಿದ್ದರು. ಆದರೆ ಅವರಿಗೆ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ ಎಂಬುದು ಪ್ರತಿಭಟನೆ ನಡೆಯದ ಕಾರಣ ಗೊತ್ತಾಗಿದೆ. ಪ್ರತಿಭಟನೆ ಮುಂದೂಡುವ ಬಗ್ಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದ ಪಾಟೀಲ್ ಅವರು, ಪ್ರತಿಭಟನೆ ರದ್ದುಪಡಿಸಿದ್ದರ ಬಗ್ಗೆಯಾಗಲಿ, ಮತ್ತೊಮ್ಮೆ ಮುಂದೂಡಿರುವ ಬಗ್ಗೆಯಾಗಲಿ ಮಾಹಿತಿ ನೀಡಿಲ್ಲ.
ಮುಳುವಾಯ್ತೇ ಬಿಜೆಪಿ ಸಖ್ಯ?: ಭೀಮಾಶಂಕರ ಪಾಟೀಲ್ ಬಿಜೆಪಿ ಜತೆಗೆ ಗುರುತಿಸಿಕೊಂಡವರು. ಸದ್ಯ ರಾಜ್ಯದಲ್ಲಿರುವುದು ಕಾಂಗ್ರೆಸ್ ಸರ್ಕಾರ. ಇದೇ ಕಾರಣಕ್ಕೆ ಅವರ ಪ್ರತಿಭಟನೆಗೆ ಬೆಂಬಲ ಸಿಗದಂತೆ ನೋಡಿಕೊಳ್ಳಲಾಗಿದೆ, ಮೇಲಾಗಿ ಪಾಟೀಲ್ ಮೂಲಕ ಸರ್ಕಾರದ ಮೇಲೆ ಒತ್ತಡ ತರುವ ಕೆಲವರ ಚಿತಾವಣೆಯನ್ನು ವಿಫಲಗೊಳಿಸುವ ಪ್ರಯತ್ನಕ್ಕೂ ಯಶ ಸಿಕ್ಕಿದೆ ಎಂಬ ಮಾತು ಕೇಳಿಬಂದಿದೆ.
ವಿಶ್ವವಿದ್ಯಾಲಯಕ್ಕೆ ಮುಖಭಂಗ?
ಕನ್ನಡ ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗೆಯೇ ಪ್ರತಿಭಟನೆ ನಡೆಸುವುದಾಗಿ ಹೇಳಿ ಕೊನೆಯ ಕ್ಷಣದಲ್ಲಿ ಯಾವ ಸುದ್ದಿಯೂ ಇಲ್ಲದೆ ಕಾಲ್ತಿತ್ತ ಸಂಘಟನೆಯಿಂದ ವಿಶ್ವವಿದ್ಯಾಲಯವೇ ಮುಖಭಂಗ ಅನುಭವಿಸುವಂತಾಗಿದೆ ಎಂಬ ಮಾತು ಕೇಳಿಬಂದಿದೆ. ‘ಪ್ರತಿಭಟನೆ ನಡೆಸಿ ಎಂದು ನಾವು ಹೇಳಿರಲಿಲ್ಲ ವಿಶ್ವವಿದ್ಯಾಲಯಕ್ಕಾಗಿ ನಡೆಸುವ ಪ್ರತಿಭಟನೆ ಕ್ಯಾಂಪಸ್ ಆವರಣದಲ್ಲಿ ನಡೆದರೆ ತಪ್ಪೇನಿಲ್ಲ ಎಂಬ ಕಾರಣಕ್ಕೆ ಅದಕ್ಕೆ ವ್ಯವಸ್ಥೆ ಮಾಡಿಕೊಡಲು ನಾವು ಸಜ್ಜಾಗಿದ್ದೆವು’ ಎಂದು ವಾರದ ಹಿಂದೆ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದ್ದರು. ಆದರೆ ಇದೀಗ ಪ್ರತಿಭಟನೆ ರದ್ದಾದ ಬಗ್ಗೆ ಅವರ ಪ್ರತಿಕ್ರಿಯೆ ಪಡೆಯಲು ಯತ್ನಿಸಿದರೂ ಅವರು ಸಿಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.