
ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಾಲಿ ಕುಲಪತಿ ಅವರ ಅಧಿಕಾರ ಅವಧಿ ಮಾರ್ಚ್ 23ಕ್ಕೆ ಕೊನೆಗೊಳ್ಳಲಿದ್ದು, ಹೊಸ ಕುಲಪತಿ ನೇಮಕಾತಿ ಕುರಿತಂತೆ ಶೋಧನಾ ಸಮಿತಿಗೆ ತಜ್ಞರೊಬ್ಬರನ್ನು ನಾಮನಿರ್ದೇಶನ ಇದುವರೆಗೂ ಮಾಡದೆ ಇರುವುದಕ್ಕೆ ಉನ್ನತ ಶಿಕ್ಷಣ ಇಲಾಖೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಅವರು ಈ ಸಂಬಂಧ ಫೆ.17ರಂದು ಕುಲಸಚಿವರಿಗೆ ಪತ್ರ ಬರೆದಿದ್ದು, 1991ರ ಕನ್ನಡ ವಿಶ್ವವಿದ್ಯಾಲಯ ಕಾಯ್ದೆಯ ಸೆಕ್ಷನ್ 13(2) ರಂತೆ ತಕ್ಷಣ ಕಾರ್ಯಕಾರಿ ಸಮಿತಿಯಿಂದ ಶೋಧನಾ ಸಮಿತಿಗೆ ವ್ಯಕ್ತಿಯೊಬ್ಬರನ್ನು ನಾಮನಿರ್ದೇಶನ ಮಾಡುವಂತೆ ಸೂಚಿಸಿದ್ದಾರೆ.
ವಾಸ್ತವವಾಗಿ ಕುಲಪತಿ ಅವರ ಅಧಿಕಾರ ಅವಧಿ ಮಾರ್ಚ್ 23ಕ್ಕೆ ಕೊನೆಗೊಳ್ಳಲಿದೆ, ಏಕೆಂದರೆ 2023ರ ಮಾರ್ಚ್ 23ರಂದು ಅವರು ಅಧಿಕಾರ ವಹಿಸಿಕೊಂಡಿದ್ದರು. ಆದರೆ ತಾಂತ್ರಿಕವಾಗಿ 2026ರ ಫೆಬ್ರುವರಿ 21ರಂದೇ ಅದು ಕೊನೆಗೊಳ್ಳುತ್ತದೆ. ನೂತನ ಕುಲಪತಿ ನೇಮಕಾತಿ ಆದೇಶ ಆ ದಿನ ಹೊರಬಿದ್ದಿತ್ತು. ಕಾರ್ಯದರ್ಶಿ ಅವರು ತಮ್ಮ ಪತ್ರದಲ್ಲೂ ಇದನ್ನೇ ಉಲ್ಲೇಖಿಸಿದ್ದು, ಫೆಬ್ರುವರಿ 21ರಂದು ಕುಲಪತಿ ಅವರ ಅಧಿಕಾರ ಅವಧಿ ಕೊನೆಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಅರ್ಜಿ ಆಹ್ವಾನಕ್ಕೆ ಒತ್ತಾಯ: ಈ ಮಧ್ಯೆ, ಸಿಂಡಿಕೇಟ್ ಸದಸ್ಯ ಬಣ್ಣದಮನೆ ಸೋಮಶೇಖರ್ ಅವರು ಕಳೆದ ಜನವರಿ 27ರಂದೇ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರ ಕಾರ್ಯದರ್ಶಿ ಅವರಿಗೆ ಪತ್ರ ಬರೆದು, ನೂತನ ಕುಲಪತಿ ನೇಮಕಾತಿಗಾಗಿ ಅರ್ಜಿ ಆಹ್ವಾನಿಸುವ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.
‘ನಿಯಮ ಪ್ರಕಾರ ಹಾಲಿ ಕುಲಪತಿ ಅವರ ಅಧಿಕಾರ ಅವಧಿ ಕೊನೆಗೊಳ್ಳುವುದಕ್ಕೆ ಮೂರು ತಿಂಗಳ ಮೊದಲೇ ನೂತನ ಕುಲಪತಿ ನೇಮಕಕ್ಕೆ ಪ್ರಕ್ರಿಯೆ ಆರಂಭವಾಗಬೇಕು’ ಎಂಬುದನ್ನು ಅವರು ಬೊಟ್ಟುಮಾಡಿ ತೋರಿಸಿದ್ದಾರೆ.
‘ಕಾಯ್ದೆ ಜಾರಿಯಲ್ಲಿ ವಿಫಲ’
ಹಾಲಿ ಕುಲಪತಿ ಅವರು ತಮ್ಮ ಮೂರು ವರ್ಷದ ಅಧಿಕಾರ ಅವಧಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಕಾಯ್ದೆ ನಿಬಂಧನೆಗಳು ಸರ್ಕಾರಿ ಸುತ್ತೋಲೆಗಳು ಹಾಗೂ ನ್ಯಾಯಾಲಯದ ಆದೇಶಗಳನ್ನು ಜಾರಿಗೆ ತರುವಲ್ಲಿ ವಿಫಲರಾಗಿದ್ದಾರೆ. ನಿಯಮದಂತೆ ಸಿಂಡಿಕೇಟ್ ಸದಸ್ಯರು ಈ ವಿಷಯ ಪ್ರಸ್ತಾಪಿಸಿದಾಗಲೂ ಅವುಗಳನ್ನು ಕಡೆಗಣಿಸಲಾಗಿದೆ. ಇದರಿಂದಾಗಿ ಕನ್ನಡ ವಿಶ್ವವಿದ್ಯಾಲದಯ ಅಭಿವೃದ್ಧಿಗೆ ಧಕ್ಕೆಯಾಗಿದ್ದು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬಣ್ಣದಮನೆ ಸೋಮಶೇಖರ್ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.