ADVERTISEMENT

ಹಂಪಿ ಸಾವಿರಾರು ಭಕ್ತರಿಂದ ಪುಣ್ಯಸ್ನಾನ: ಬಟ್ಟೆ ಬದಲಿಸುವ ಸ್ಥಳ ಇಲ್ಲದೆ ಪರದಾಟ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 6:02 IST
Last Updated 17 ಜನವರಿ 2026, 6:02 IST
ಹಂಪಿಯ ಚಕ್ರತೀರ್ಥದಲ್ಲಿ ಗುರುವಾರ ಸಂಕ್ರಾಂತಿ ಪುಣ್ಯಸ್ನಾನ ಮಾಡಿದ ಮಹಿಳೆಯರು ಬಟ್ಟೆ ಬದಲಿಸಲು ಪರದಾಡಿದ ಬಗೆ  –ಪ್ರಜಾವಾಣಿ ಚಿತ್ರ
ಹಂಪಿಯ ಚಕ್ರತೀರ್ಥದಲ್ಲಿ ಗುರುವಾರ ಸಂಕ್ರಾಂತಿ ಪುಣ್ಯಸ್ನಾನ ಮಾಡಿದ ಮಹಿಳೆಯರು ಬಟ್ಟೆ ಬದಲಿಸಲು ಪರದಾಡಿದ ಬಗೆ  –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಮಕರ ಸಂಕ್ರಾಂತಿ ಪ್ರಯುಕ್ತ ಸಾವಿರಾರು ಭಕ್ತರು ಹಂಪಿಯ ತುಂಗಭದ್ರಾ ನದಿಯಲ್ಲಿ ಗುರುವಾರ ಪುಣ್ಯಸ್ನಾನ ಮಾಡಿದರು. ಆದರೆ ಚಕ್ರತೀರ್ಥದಲ್ಲಿ ಬಟ್ಟೆ ಬದಲಿಸಲು ವ್ಯವಸ್ಥೆ ಇಲ್ಲದೆ ಮಹಿಳೆಯರು ಪರದಾಡಿದರು.

ವಿರೂಪಾಕ್ಷ ದೇವಸ್ಥಾನ ಸಮೀಪದ ಸ್ನಾನಘಟ್ಟದಲ್ಲಿ ಸಾವಿರಾರು ಮಂದಿ ಸ್ನಾನ ಮಾಡಿದರೆ, ಅಲ್ಲಿ ಬಟ್ಟೆ ಬದಲಾಯಿಸಲು ಸ್ಥಳಾವಕಾಶ ಇತ್ತು. ಆದರೆ ಚಕ್ತತೀರ್ಥದಲ್ಲಿ ಆ ಸೌಲಭ್ಯ ಇಲ್ಲ. ಹೀಗಾಗಿ ನೂರಾರು ಮಹಿಳೆಯರು ಬಹಳ ಯಾತನೆಪಟ್ಟರು. ಕೆಲವರು ಸೀರೆಯನ್ನೇ ಮರೆಯಾಗಿ ಹಿಡಿದುಕೊಂಡು ಮಹಿಳೆಯರು ಬಟ್ಟೆ ಬದಲಿಸಲು ನೆರವಾದರು. 

‘ವಿರೂಪಾಕ್ಷ ದೇವಸ್ಥಾನದ ಬಳಿ ಇರುವ ಸ್ನಾನಘಟ್ಟಕ್ಕಿಂತಲೂ ಚಕ್ರತೀರ್ಥದಲ್ಲಿ ಪುಣ್ಯ ಸ್ನಾನ ಮಾಡುವವರು ಅಧಿಕ ಮಂದಿ ಇದ್ದಾರೆ, ಇಲ್ಲಿ ಎರಡು ದೇವಸ್ಥಾನಗಳು ಹಾಗೂ ಬಂಡೆಯ ಮೇಲೆ ಶಿವಲಿಂಗಗಳು ಇರುವ ಕಾರಣ ಭಕ್ತರು ಇಲ್ಲಿ ಪುಣ್ಯಸ್ನಾನ ಮಾಡಲು ಬಯಸುತ್ತಾರೆ, ಆದರೆ ಮಹಿಳೆಯರಿಗೆ ಬಟ್ಟೆ ಬದಲಿಸಲು ಒಂದಾದರೂ ತಾತ್ಕಾಲಿಕ ಕೊಠಡಿ ವ್ಯವಸ್ಥೆಯನ್ನು ಸಂಬಂಧಪಟ್ಟವರು ಮಾಡಬೇಕಿತ್ತು’ ಎಂದು ಹಲವು ಪ್ರವಾಸಿಗರು ದೂರಿದರು.

ADVERTISEMENT

ದೇವಸ್ಥಾನಗಳಲ್ಲಿ ಜನಸ್ತೋಮ: ಸಂಕ್ರಾಂತಿ ಪ್ರಯುಕ್ತ ವಿರೂಪಾಕ್ಷ ಸಹಿತ ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿ ಜನಸ್ತೋಮವೇ ನೆರೆದಿತ್ತು. ಮನೆಯಿಂದ ಬುತ್ತಿ ಕಟ್ಟಿಕೊಂಡು ಹೋಗಿ ದೇವರ ದರ್ಶನ ಪಡೆದ ಬಳಿಕ ಮನೆಮಂದಿ ಸೇರಿ ಊಟ ಮಾಡುವುದು ಸಹ ಇಂದು ಸಾಮಾನ್ಯ ದೃಶ್ಯವಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.