ADVERTISEMENT

ಹಂಪಿಯಲ್ಲಿ ಪೇಂಟಿಂಗ್: ಸುಲಭಕ್ಕೆ ಸಿಗುತ್ತಿಲ್ಲ ಅನುಮತಿ

ಮೂರು ವರ್ಷದಿಂದ ಇದೇ ಗೋಳು–ಚಿತ್ರಸಂತೆಯಲ್ಲಿ ಕಣ್ಮರೆಯಾಗುತ್ತಿದೆ ಹಂಪಿಯ ಸೊಬಗು

ಎಂ.ಜಿ.ಬಾಲಕೃಷ್ಣ
Published 24 ಜೂನ್ 2025, 4:25 IST
Last Updated 24 ಜೂನ್ 2025, 4:25 IST
ಹಂಪಿಯಲ್ಲಿ ಪೇಂಟಿಂಗ್ ಮಾಡುವ ಉದ್ದೇಶದಿಂದ ಬೆಳಗಾವಿಯಿಂದ ಮೂರು ದಿನಗಳ ಹಿಂದೆ ಬಂದ ಕಾಲೇಜು ವಿದ್ಯಾರ್ಥಿಗಳ ತಂಡ ಎಎಸ್‌ಐ ಅನುಮತಿಗಾಗಿ ಸೋಮವಾರ ಕಾದು ಕುಳಿತಿತ್ತು
ಹಂಪಿಯಲ್ಲಿ ಪೇಂಟಿಂಗ್ ಮಾಡುವ ಉದ್ದೇಶದಿಂದ ಬೆಳಗಾವಿಯಿಂದ ಮೂರು ದಿನಗಳ ಹಿಂದೆ ಬಂದ ಕಾಲೇಜು ವಿದ್ಯಾರ್ಥಿಗಳ ತಂಡ ಎಎಸ್‌ಐ ಅನುಮತಿಗಾಗಿ ಸೋಮವಾರ ಕಾದು ಕುಳಿತಿತ್ತು   

ಹೊಸಪೇಟೆ (ವಿಜಯನಗರ): ಹಂಪಿ ಎಂದರೆ ಅದು ಬಯಲು ವಸ್ತುಸಂಗ್ರಹಾಲಯ. ಇಲ್ಲಿನ ಸ್ಮಾರಕಗಳ ಬಳಿ ಕುಳಿತು ಕುಂಚದಲ್ಲಿ ಮೂಡುವ ಚಿತ್ರಕಲೆ ಹೊರಸೂಸುವ ಸೌಂದರ್ಯ ವರ್ಣಿಸಲಸದಳ. ಆದರೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಸುಲಭದಲ್ಲಿ  ಅನುಮತಿ ನೀಡುತ್ತಿಲ್ಲ ಎಂಬ ದೂರು ಕೇಳಿಬಂದಿದೆ.

ಮೂರು ತಿಂಗಳ ಹಿಂದೆ ಮಹಾರಾಷ್ಟ್ರದಿಂದ ಎಂಟು ಮಂದಿ ಕಲಾವಿದರ ತಂಡ ಬಂದಿತ್ತು, ಚಿತ್ರಕಲೆಗೆ ಅನುಮತಿ ಸಿಗದೆ ನಿರಾಸೆಯಿಂದ ವಾಪಸಾಗಿತ್ತು. ಬೆಳಗಾವಿಯಿಂದ ಮೂರು ದಿನಗಳ ಹಿಂದೆ 20 ಮಂದಿಯ ದೃಶ್ಯಕಲಾ ವಿದ್ಯಾರ್ಥಿಗಳ ತಂಡ ಬಂದಿದ್ದು, ಚಿತ್ರ ಬಿಡಿಸಲು ಅವರಿಗೆ ಇನ್ನೂ ಅನುಮತಿ ಸಿಕ್ಕಿಲ್ಲ. ‘ನಾವು ಸ್ಮಾರಕಗಳ ಕಲ್ಲನ್ನು ಎತ್ತಿಕೊಂಡು ಹೋಗುತ್ತೇವೆಯೇ? ಏಕಿಷ್ಟು ಉಡಾಫೆ? ಸಂಸ್ಥೆಗಳ ಲೆಟರ್‌ಹೆಡ್‌ನಲ್ಲಿ ಪತ್ರ ಸಲ್ಲಿಸಿ, ಇತರ ಮಾಹಿತಿ ಒದಗಿಸಿದರೂ ಸ್ಪಂದನವಿಲ್ಲದಿದ್ದರೆ ಹೇಗೆ?’ ಎಂಬುದು ಹಲವು ಕಲಾವಿದರ ಪ್ರಶ್ನೆ.

‘ಕಳೆದ ಮೂರು ವರ್ಷಗಳಿಂದ ಹೀಗೆ 20ಕ್ಕೂ ಅಧಿಕ ತಂಡಗಳು ಅನುಮತಿ ಸಿಗದೆ ವಾಪಸ್‌ ಹೋಗಿರುವುದು ನನ್ನ ಗಮನಕ್ಕೆ ಬಂದಿದೆ. ಅನುಮತಿ ಸಿಗದ ಕಾರಣ ಬೆಂಗಳೂರು ಚಿತ್ರ ಸಂತೆಯಲ್ಲಿ ಹಂಪಿಯ ಕಲಾಕೃತಿಗಳು ಕಳೆದ ಮೂರು ವರ್ಷಗಳಿಂದ ಕಂಗೊಳಿಸುತ್ತಿಲ್ಲ. ನೂರಾರು ಕಲಾವಿದರು ನಿರಾಸೆಯಿಂದ ವಾಪಸಾಗುತ್ತಿದ್ದಾರೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ತಿಳಿಸಿದರು.

ADVERTISEMENT

‘ಎಲ್ಲಾ ನಿಯಮಗಳನ್ನೂ ಪಾಲಿಸಿದರೂ ವಿಳಂಬ ತಂತ್ರ ಅನುಸರಿಸಲಾಗುತ್ತಿದೆ, ಇದರಿಂದ ಬಹಳಷ್ಟು ಕಲಾವಿದರು ಚಿತ್ರ ಬಿಡಿಸದೆ ವಾಪಸಾಗಿದ್ದನ್ನು ನಾನು ಕಂಡಿದ್ದೇನೆ, ಸ್ವತಃ ನಾನೇ ಇದರ ನೋವು ಅನುಭವಿಸಿದ್ದೇನೆ’ ಎಂದು ಹಂಪಿಯ ಕಲಾವಿದರ ಉದಯ್‌ ಹೇಳಿದರು.

ಬೀದರ್‌ನ ಸುನಿಲ್ ಅವರು ಸಹ ತಮ್ಮ ಅಳಲು ತೋಡಿಕೊಂಡು, ಕಲಾವಿದರು ಕಲ್ಲನ್ನು ಎತ್ತಿ ಸಾಗಿಸುವುದಿಲ್ಲ, ಸ್ಮಾರಕಗಳಿಗೆ ಪೇಂಟ್‌ ಸಹ ಮಾಡುವುದಿಲ್ಲ, ಹೀಗಿದ್ದರೂ ಅವರನ್ನು ದೂರ ಇಡುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದರು.

ನಿರಾಕರಣೆ: ಕಲಾವಿದರು ಹೇಳಿದಂತೆ ಎಎಸ್‌ಐ ಪೇಂಟಿಂಗ್‌ಗೆ ಅನುಮತಿ ನೀಡುತ್ತಿಲ್ಲ ಎಂದು ಸಾರಾಸಗಟಾಗಿ ಹೇಳಲಾಗದು, ಕೆಲವು ದಾಖಲೆಗಳನ್ನು ಕೇಳಲಾಗುತ್ತಿದೆ, ಅದನ್ನು ಒದಗಿಸಿದವರಿಗೆ ಅನುಮತಿ ನೀಡಲಾಗುತ್ತಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. ಅನುಮತಿ ನೀಡುವ ವಿಭಾಗದ ಅಧಿಕಾರಿಯೊಬ್ಬರಿಗೆ ಕರೆ ಮಾಡಿದರೂ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.

ಹಂಪಿಯಲ್ಲಿ ಬಿಡಿಸುವ ಚಿತ್ರಗಳಿಗೆ ಅದರದ್ದೇ ಆದ ಸೊಬಗು ಚಿತ್ರಸಂತೆಗಳಲ್ಲಿ  ಇರುತ್ತದೆ ಭಾರಿ ಬೇಡಿಕೆ ಎಎಸ್ಐ ಅನುಮತಿ ಪಡೆಯಲು ಹರಸಾಹಸ
ಎಲ್ಲ ಮಾಹಿತಿ ಒದಗಿಸಿ ಪೇಂಟಿಂಗ್‌ಗೆ ಅನುಮತಿ ಕೇಳಿದ್ದೇವೆ 15 ದಿನ ಅಯಿತು ಎಎಸ್‌ಐನಿಂದ ಸ್ಪಂದನವೇ ಇಲ್ಲ ಮೂರು ದಿನದಿಂದ ಇಲ್ಲಿ ಕಾಯುತ್ತಿದ್ದೇವೆ
ಅಡವೆಪ್ಪ ಮುಸ್ರಿ ಪ್ರಾಂಶುಪಾಲರು ಬೆನನ್ ಸ್ಮಿತ್ ಕಾಲೇಜ್ ಆಫ್ ಫೈನ್‌ ಆರ್ಟ್ಸ್‌ ಬೆಳಗಾವಿ
ಶಾಲೆಯ ಲೆಟರ್‌ಹೆಡ್‌ನಲ್ಲೇ ಅರ್ಜಿ ಸಲ್ಲಿಸಿದರೆ ಬೊನಾಫೈಡ್‌ ಲೆಟರ್ ಕೇಳುತ್ತಾರೆ ಅಲ್ಲಿನ ನಿಯಮವೇ ಗೊತ್ತಾಗುತ್ತಿಲ್ಲ
ನಾನು ಚಿತ್ರ ಬಿಡಿಸದೆ ನಿರಾಸೆಯಿಂದ ಮರಳಿದ್ದೇನೆ ದಿನೇಶ್ ಬಾದಾಮಿಯ ಕಲಾ ಶಿಕ್ಷಕ

ರಾಜ್ಯದಲ್ಲಿವೆ 110 ಕಲಾ ಕಾಲೇಜ್‌ಗಳು

ರಾಜ್ಯದಲ್ಲಿ 110 ದೃಶ್ಯಕಲಾ ಕಾಲೇಜುಗಳಿದ್ದು ಹೊರಾಂಗಣದಲ್ಲಿ ಚಿತ್ರ ಬಿಡಿಸುವುದು ಇಲ್ಲಿನ ವಿದ್ಯಾರ್ಥಿಗಳಿಗೆ ಪಠ್ಯದ ಭಾಗವಾಗಿರುತ್ತದೆ. ವರ್ಷಕ್ಕೆ 15ರಿಂದ 20 ಕಾಲೇಜುಗಳು ಹಂಪಿಗೆ ಬಂದೇ ಬರುತ್ತವೆ ಇಲ್ಲಿ ಪೇಂಟಿಂಗ್ ಮಾಡಿಸಿ ವಿದ್ಯಾರ್ಥಿಗಳಿಗೆ ಹೊಸ ಅನುಭವ ಕೊಡಿಸುತ್ತವೆ. ಆದರೆ ಎಎಸ್‌ಐ ವರ್ತನೆಯಿಂದ ಹಲವರು ಮೌನವಾಗಿಯೇ ಹಲುಬಿದ್ದಾರೆ ಕೆಲವರಷ್ಟೇ ಪ್ರತಿಭಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.