ADVERTISEMENT

ಹಂಪಿಯ ವೈಭವ ಇನ್ನಷ್ಟು ಬಿಂಬಿಸುವ ಕೆಲಸ ಅಗತ್ಯ: ಇ.ಬಾಲಕೃಷ್ಣಪ್ಪ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 5:09 IST
Last Updated 28 ಸೆಪ್ಟೆಂಬರ್ 2025, 5:09 IST
ಹಂಪಿಯಲ್ಲಿ ಶನಿವಾರ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಎಡಿಸಿ ಇ.ಬಾಲಕೃಷ್ಣಪ್ಪ ಚಾಲನೆ ನೀಡಿದರು
ಹಂಪಿಯಲ್ಲಿ ಶನಿವಾರ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಎಡಿಸಿ ಇ.ಬಾಲಕೃಷ್ಣಪ್ಪ ಚಾಲನೆ ನೀಡಿದರು   

ಹೊಸಪೇಟೆ (ವಿಜಯನಗರ): ವಿಶ್ವವಿಖ್ಯಾತ ಹಂಪಿಯ ವಿಜಯನಗರದ ಪರಂಪರೆ, ವಾಸ್ತುಶಿಲ್ಪ, ಶಿಲ್ಪಕಲೆ ಹಾಗೂ ಐತಿಹಾಸಿಕ ವೈಭವ ವಿಶ್ವಮಟ್ಟದಲ್ಲಿ ಪ್ರತಿಬಿಂಬಿಸುವ ಕಾರ್ಯ ಇನ್ನಷ್ಟು ನಡೆಯಬೇಕಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಹೇಳಿದರು.

ಹಂಪಿಯ ಎದುರು ಬಸವಣ್ಣ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಇತರ ಹಲವು ಇಲಾಖೆಗಳ ಸಹಯೋಗದಲ್ಲಿ ಶನಿವಾರ ವಿಶ್ವ ಪ್ರವಾಸೋದ್ಯಮ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿ ಮತ್ತು ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಹಂಪಿ ಪ್ರವಾಸೋದ್ಯಮದಿಂದ ಜಿಲ್ಲಾಡಳಿತಕ್ಕೆ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ. ಸ್ಥಳೀಯರಿಗೆ ಅನೇಕ ಉದ್ಯೋಗಾವಕಾಶಗಳು ಒದಗಿವೆ. ಈ ಭಾಗದ ಗ್ರಾಮೀಣಾಭಿವೃದ್ಧಿಗೆ ಅನುಕೂಲವಾಗಿದೆ’ ಎಂದರು.

ADVERTISEMENT

ಪಾರಂಪರಿಕ ನಡಿಗೆಯನ್ನು ಶ್ರೀವಿಜಯ ವಿಠ್ಠಲ ದೇವಸ್ಥಾನದ ಗೆಜ್ಜಲ ಮಂಟಪದಿಂದ ಆರಂಭಗೊAಡು, ಕುದುರೆಗೊಂಬೆ ಮಂಟಪ, ಪುಷ್ಕರಣಿ, ಮಾರುಕಟ್ಟೆ ಬೀದಿ ಮಾರ್ಗವಾಗಿ ವಿಜಯ ವಿಠ್ಠಲ ದೇವಸ್ಥಾನದವರೆಗೆ ನಡೆಸಲಾಯಿತು.

ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ.ಎಸ್.ತಳಕೇರಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಅಶ್ವಿನ್ ಕೋತಂಬ್ರಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ದೀಪಕ್, ಭಾರತೀಯ ಪುರಾತತ್ವ ಸರ್ವೇಕ್ಷಣಾಧಿಕಾರಿ ರವಿಕುಮಾರ, ಹೆರಿಟೇಜ್ ಮಾಲೀಕರಾದ ಪ್ರಸನ್ನ, ಪ್ರವಾಸಿ ಮಾರ್ಗದರ್ಶಕರ ಸಂಘದ ಉಪಾಧ್ಯಕ್ಷ ದೇವರಾಜ, ಪ್ರವಾಸಿ ಮಾರ್ಗದರ್ಶಕರು, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಕಾರ್ಯಕರ್ತರು ಇದ್ದರು.

ವೇದಿಕೆ ಕಾರ್ಯಕ್ರಮ: ವಿಜಯ ವಿಠ್ಠಲ ದೇವಸ್ಥಾನ ಬಳಿ ವೇದಿಕೆ ಕಾರ್ಯಕ್ರಮ ನಡೆಯಿತು. ‘ಸ್ಥಳೀಯ ಪ್ರವಾಸಿ ತಾಣಗಳು, ಐತಿಹಾಸಿಕ ಸ್ಮಾರಕಗಳು ಮತ್ತು ಭಕ್ತಿ ಕೇಂದ್ರಗಳ ಸಂರಕ್ಷಣೆಯು ಪ್ರತಿಯೊಬ್ಬರೂ ಆದ್ಯ ಕರ್ತವ್ಯವೆಂದು ಭಾವಿಸಬೇಕು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಅಧಿಕಾರಿ ಸಿ.ದೇವರಾಜ್ ಹೇಳಿದರು.

ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಕಲ್ಲಿನರಥ ಬಳಿ ಕಲಾವಿದೆಯ ನೃತ್ಯ ವೈಭವ

‘ಮುಕ್ತ ಸಹಕಾರ’

ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ.ಎಸ್.ತಳಕೇರಿ ಮಾತನಾಡಿ ಪ್ರವಾಸಿ ತಾಣದಲ್ಲಿರುವ ಹೊಟೇಲ್ ಮಾಲೀಕರು ಹೋಂಸ್ಟೇಗಳು ಕೈಗಾರಿಕ ಮತ್ತು ವಾಣಿಜ್ಯ ಉದ್ಯಮಿಗಳಿಗೆ ಇಲಾಖೆಯಿಂದ ಮುಕ್ತವಾಗಿ ಸಹಕಾರ ನೀಡಲಾಗುತ್ತಿದೆ. ಈ ವರ್ಷ ಹಂಪಿಯಲ್ಲಿ 42 ನೂತನ ತಾಣಗಳನ್ನು ಗುರುತಿಸಿ ಪ್ರವಾಸಿಗಳಿಗೆ ವೀಕ್ಷಣಾ ಸ್ಥಳಗಳನ್ನು ಹೆಚ್ಚಿಸಲಾಗಿದೆ. ಪ್ರವಾಸೋದ್ಯಮಕ್ಕೆ ಸ್ಥಳೀಯರಿಂದ ಹೆಚ್ಚಿನ ಪ್ರೋತ್ಸಾಹ ಮತ್ತು ಸಹಕಾರ ಅಗತ್ಯವಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.