
ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣ ಹಂಪಿಯ ಸ್ಮಾರಕಗಳ ರಕ್ಷಣೆ ಜತೆಗೆ ಸುಸ್ಥಿರ ಅಭಿವೃದ್ಧಿಗೆ, ಮೂಲಸೌಲಭ್ಯ ವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರವಾಸಿ ಮಾರ್ಗದರ್ಶಿಗಳ ಸಂಘ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರಲ್ಲಿ ಮನವಿ ಮಾಡಿದೆ.
ಹಂಪಿ ಪ್ರವಾಸದಲ್ಲಿರುವ ಸಚಿವರನ್ನು ಮಂಗಳವಾರ ಭೇಟಿ ಮಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ವಿ.ವಿರೂಪಾಕ್ಷಿ ಮತ್ತು ಇತರ ಮಾರ್ಗದರ್ಶಿಗಳು, ಹಲವು ಬೇಡಿಕೆಗಳು ಇರುವ ಮನವಿಪತ್ರ ಸಲ್ಲಿಸಿದರು.
ಹಂಪಿಗೆ ಅಗತ್ಯವಾಗಿ ತುರ್ತು ವೈದ್ಯಕೀಯ ಸೌಲಭ್ಯಗಳು ಬೇಕಾಗಿವೆ. ಮುಖ್ಯವಾಗಿ ಪ್ರಥಮ ಚಿಕಿತ್ಸೆ ಕೇಂದ್ರ, ಆಂಬುಲೆನ್ಸ್ ಒದಗಿಸಬೇಕು. ಬಿಸಿಲು ಸಂಬಂಧಿತ ತೊಂದರೆಗಳಿಂದ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿಯನ್ನು ಇಲ್ಲಿ ನಿಯೋಜಿಸಬೇಕು ಎಂದೂ ಒತ್ತಾಯಿಸಲಾಗಿದೆ.
ಪ್ರವಾಸಿ ಮಾರ್ಗದರ್ಶಿಗಳು ಪ್ರವಾಸಿ ಸ್ಥಳಗಳ ನಿಜವಾದ ರಾಯಭಾರಿಗಳಾಗಿದ್ದು, ಅವರಿಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸಬೇಕು, ಉಚಿತ ಅಥವಾ ರಿಯಾಯಿತಿ ದರದಲ್ಲಿ ರೈಲ್ವೆ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂದು ಸಹ ಮನವಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.