ADVERTISEMENT

ಹಂಪಿ | ಯುನೆಸ್ಕೊ ಪತ್ರ ತಂದ ಸಂಚಲನ: ತಕ್ಷಣದಿಂದ ಅಕ್ರಮ ಕಟ್ಟಡಗಳ ನೆಲಸಮ?

ಪಾರಂಪರಿಕ ತಾಣ ಕಳೆದುಕೊಳ್ಳುವ ಭೀತಿ

ಎಂ.ಜಿ.ಬಾಲಕೃಷ್ಣ
Published 17 ಜನವರಿ 2026, 6:02 IST
Last Updated 17 ಜನವರಿ 2026, 6:02 IST
<div class="paragraphs"><p>ಹಂಪಿ</p></div>

ಹಂಪಿ

   

ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣ ಎಂಬ ಹಣೆಪಟ್ಟಿಯನ್ನು ನಾಲ್ಕು ದಶಕಗಳಿಂದ ಉಳಿಸಿಕೊಂಡು ಬಂದಿರುವ ಹಂಪಿಗೆ ಮತ್ತೊಮ್ಮೆ ಈ ಪಟ್ಟ ಕಳೆದುಕೊಳ್ಳುವ ಆತಂಕ ಎದುರಾಗಿದ್ದು, ಇದರಿಂದ ಪಾರಾಗಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮತ್ತು ಜಿಲ್ಲಾಡಳಿತ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಲು ಸಜ್ಜಾಗಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಹಂಪಿಗೆ ಪ್ರವೇಶ ದ್ವಾರದಂತೆಯೇ ಇರುವ ಕಟ್ಟಿರಾಂಪುರ ದ್ವಾರ, ಅಲ್ಲಿಗೆ ಸಮೀಪದ ಕೆಲವೆಡೆ ಅನಧಿಕೃತವಾಗಿ ನಿರ್ಮಿಸಲಾಗಿರುವ ಕಟ್ಟಡಗಳ ಕುರಿತು ಯುನೆಸ್ಕೊಗೆ ದೂರುಗಳು ಹೋಗಿದ್ದವು. ಅದನ್ನು ಗಂಭೀರವಾಗಿ ತೆಗೆದುಕೊಂಡಿರುವ ಯುನೆಸ್ಕೊ, ತನ್ನ ತಂಡವನ್ನು ಕೆಲವೇ ದಿನಗಳಲ್ಲಿ ಹಂಪಿಗೆ ಕಳುಹಿಸಲಿದ್ದು, ಆ ತಂಡ ಬರುವುದಕ್ಕೆ ಮೊದಲಾಗಿಯೇ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಒತ್ತಡ ಸೃಷ್ಟಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸಿಡಿಲಿನಂತೆ ಬಂದ ಪತ್ರ: ತಂಡವನ್ನು ಕಳುಹಿಸುವುದಕ್ಕೆ ಮೊದಲಾಗಿ ಯುನೆಸ್ಕೊ ಮೂರು ದಿನಗಳ ಹಿಂದೆ ಜಿಲ್ಲಾಡಳಿತ, ಎಎಸ್ಐ ಸಹಿತ ಕೆಲವು ಇತರ ಸಂಸ್ಥೆಗಳು, ಇಲಾಖೆಗಳಿಗೆ ಪತ್ರ ಬರೆದು, ಯುನೆಸ್ಕೊ ಮಾರ್ಗಸೂಚಿ ಪಾಲಿಸಿಲ್ಲವಾದ ಕಾರಣ ಪಾರಂಪರಿಕ ಪಟ್ಟಿಯಿಂದ ತೆಗೆದುಹಾಕುವ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದೆ.

ಈ ಹಿಂದೆಯೂ ಕೆಲವು ಸಂದರ್ಭಗಳಲ್ಲಿ ಹಂಪಿಗೆ ಯುನೆಸ್ಕೊ ಪಟ್ಟ ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ತುಂಗಭದ್ರಾ ನದಿಗೆ ಅಡ್ಡಲಾಗಿ ಆನೆಗುಂದಿ–ತಳವಾರಘಟ್ಟ ಸೇತುವೆ ನಿರ್ಮಿಸುತ್ತಿದ್ದಾಗ 2006ರಲ್ಲಿ ಹಂಪಿ ಯುನೆಸ್ಕೊ ಪಟ್ಟಿಯಿಂದ ಹೊರಬಿದ್ದು ಕಪ್ಪು ಪಟ್ಟಿಯಲ್ಲಿ ಸಿಲುಕಿತ್ತು. ನಿಯಮ ಪಾಲಿಸುವ ವಾಗ್ದಾನದ ಬಳಿಕ ಪಾರಂಪರಿಕ ಪಟ್ಟಿ ಮರುಸ್ಥಾಪನೆಗೊಂಡಿತ್ತು.

ತಡೆಯಲೂ ಶತಪ್ರಯತ್ನ: ಕೇವಲ 28 ದಿನಗಳಲ್ಲಿ ಹಂಪಿ ಉತ್ಸವ ನಡೆಯಲಿದೆ, ಸಿದ್ಧತೆಯೂ ಆರಂಭವಾಗಿದೆ. ಈ ಸಂದರ್ಭದಲ್ಲಿ ಅಕ್ರಮ ಕಟ್ಟಡಗಳ ತೆರವು ಬೇಡ, ಹಂಪಿ ಉತ್ಸವ ಮುಗಿದ ಬಳಿಕ ನೋಡಿಕೊಂಡರಾಯಿತು ಎಂದು ಹೇಳಿ ಜಿಲ್ಲಾಡಳಿತದ ಮೇಲೆ ಪ್ರಭಾವಿ ವ್ಯಕ್ತಿಗಳು ಒತ್ತಡ ಹಾಕಿರುವ ಬೆಳವಣಿಗೆ ಸಹ ನಡೆದಿದೆ.

ಆದರೆ ಈ ಒತ್ತಡಕ್ಕೆ ಮಣಿದರೆ ವಿಶ್ವ ಪಾರಂಪರಿಕ ತಾಣ ಪಟ್ಟವನ್ನು ಹಂಪಿ ಕಳೆದುಕೊಳ್ಳುವ ಭೀತಿ ಇರುವ ಕಾರಣ ಜಿಲ್ಲಾಡಳಿತ ಎಂತಹ ಕ್ರಮಕ್ಕೆ ಮುಂದಾಗಲಿದೆ ಎಂಬ ಕುತೂಹಲ ನೆಲೆಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.