ADVERTISEMENT

ಹೊಸಪೇಟೆ | ಧರಣಿಗೆ ಸಿಕ್ತು ಒಂದು ತಿಂಗಳ ಸಂಬಳ: ಇನ್ನೂ 10 ತಿಂಗಳ ವೇತನ ಬಾಕಿ!

ಸಿಎಂ ಬಳಿಗೆ ನಿಯೋಗ ತೆರಳಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 13:01 IST
Last Updated 8 ಜುಲೈ 2025, 13:01 IST
<div class="paragraphs"><p>ನೌಕರರಿಗೆ  ಸಂಬಳ ಕೊಡದೆ ಇರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.</p></div>

ನೌಕರರಿಗೆ ಸಂಬಳ ಕೊಡದೆ ಇರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.

   

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದ ಹೊರಗುತ್ತಿಗೆ ನೌಕರರಿಗೆ 11 ತಿಂಗಳಿನಿಂದ ಸಂಬಳ ಕೊಡದೆ ಇರುವುದನ್ನು ವಿರೋಧಿಸಿ ಮಂಗಳವಾರ ಕ್ಯಾಂಪಸ್‌ನ ಆಡಳಿತ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆದಿದ್ದು, ಬಳಿಕ ಒಂದು ತಿಂಗಳ ಸಂಬಳವನ್ನು ನೀಡಲಾಗಿದೆ.

ದಲಿತ ಹಕ್ಕುಗಳ ಸಮಿತಿಯ (ಡಿಎಚ್‌ಎಸ್) ಜಿಲ್ಲಾ ಘಟಕದ ಅಧ್ಯಕ್ಷ ಮರಡಿ ಜಂಬಯ್ಯ ನಾಯಕ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಳೆದ 15–20 ವರ್ಷಗಳಿಂದ ಭದ್ರತೆ, ಸ್ವಚ್ಛತೆ ಸಿಬ್ಬಂದಿಯಾಗಿ ದುಡಿಯುತ್ತಿರುವ ಎಲ್ಲಾ 48 ಮಂದಿ ಪಾಲ್ಗೊಂಡಿದ್ದರು.

ADVERTISEMENT

‘ಈ ನೌಕರರು ಬಹಳ ಕಷ್ಟಕರ ಜೀವನ ಸಾಗಿಸುತ್ತಿದ್ದು, ದಲಿತ ಯುವಜನ ಮುಖಂಡ ನಂದೀಶ ಎಂಬುವವರು ಈಚೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರೆಲ್ಲ ವಿಶ್ವವಿದ್ಯಾಲಯಕ್ಕೆ ಭೂಮಿ ನೀಡಿದ ಸಂತ್ರಸ್ತ ಕುಟುಂಬದವರು. ಹೀಗಾಗಿ ವಿಶ್ವವಿದ್ಯಾಲಯ ತಕ್ಷಣ ಇವರ ಬಾಕಿ ಸಂಬಳ ಪಾವತಿಸಬೇಕು’ ಎಂದು ಮನವಿ ಸಲ್ಲಿಸಲಾಯಿತು.

ಸಿಎಂ ಬಳಿಗೆ ನಿಯೋಗ: ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಮತ್ತು ಕುಲಸಚಿವ ಪ್ರೊ.ವಿಜಯ ಪೂಣಚ್ಚ ತಂಬಂಡ ಅವರು ಮನವಿ ಸ್ವೀಕರಿಸಿ, ವಿಶ್ವವಿದ್ಯಾಲಯ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳ ಬಗ್ಗೆ ಮನವರಿಕೆ ಮಾಡಿದರು.

‘ಸಿಂಡಿಕೇಟ್‌ ಸದಸ್ಯ ಬಿ.ಆರ್.ಪಾಟೀಲ್ ನೇತೃತ್ವದಲ್ಲಿ ಸ್ಥಳೀಯ ಶಾಸಕ ಎಚ್‌.ಆರ್.ಗವಿಯಪ್ಪ ಅವರ ಜತೆಗೆ ಸಿಎಂ ಬಳಿಗೆ ನಿಯೋಗ ಕರೆದೊಯ್ಯಲು ಈಚೆಗೆ ನಡೆದ ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಅವರು ಸ್ಪಂದಿಸುವ ವಿಶ್ವಾಸ ಇದೆ. ಹೀಗಾಗಿ ಸಂಬಳ ಪಾವತಿಗೆ ಕಾಲಾವಕಾಶ ನೀಡಬೇಕು, ಎಲ್ಲರಿಗೂ ಬಾಕಿ ಸಂಬಳ ನೀಡಲಾಗುವುದು’ ಎಂದು ಕುಲಪತಿ ಭರವಸೆ ನೀಡಿದರು.

‘ಒಂದು ತಿಂಗಳ ಸಂಬಳ ತೆಗೆದುಕೊಳ್ಳಲು ಆರಂಭದಲ್ಲಿ ಸಿಬ್ಬಂದಿ ನಿರಾಕರಿಸಿದ್ದರು, ಆದರೆ ಅವರ ಮನವೊಲಿಸಿ, ಬಾಕಿ ಸಂಬಳವೂ ಶೀಘ್ರ ಸಿಗಲಿದೆ ಎಂಬ ಭರವಸೆ ನೀಡಿದ ಬಳಿಕ ಅವರು ಅದಕ್ಕೆ ಒಪ್ಪಿದರು. ಹೀಗಾಗಿ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ. ಸಿಎಂ ಬಳಿಗೆ ತೆರಳುವ ನಿಯೋಗದಲ್ಲಿ ನಾನು ಸಹ ಹೋಗಲಿದ್ದೇನೆ’ ಎಂದು ಜಂಬಯ್ಯ ನಾಯಕ ತಿಳಿಸಿದರು.

ಪ್ರತಿಭಟನೆಯಲ್ಲಿ ಡಿಎಚ್‌ಎಸ್‌ ಪ್ರಮುಖರಾದ ಬಿ.ತಾಯಪ್ಪ ನಾಯಕ, ಎಂ.ಧನರಾಜ್‌, ಬಿ.ರಮೇಶ್ ಕುಮಾರ್, ಸೂರ್ಯನಾರಾಯಣ, ನಾಗೂ ನಾಯ್ಕ, ಎಸ್.ಸತ್ಯಮೂರ್ತಿ ಇದ್ದರು.

₹7 ಕೋಟಿ ಬೇಕು

‘ವಿಶ್ವವಿದ್ಯಾಲಯ ನಡೆಯಲು ವರ್ಷಕ್ಕೆ ಕನಿಷ್ಠ ₹7 ಕೋಟಿ ಅನುದಾನ ಬೇಕು, ಈಗ ಸಿಗುತ್ತಿರುವುದು ₹2 ಕೋಟಿಗಿಂತಲೂ ಕಡಿಮೆ. ಹೀಗಾಗಿ ಬಹಳ ಕಷ್ಟಕರ ಸ್ಥಿತಿ ಇದೆ. ಹೊರಗುತ್ತಿಗೆ ನೌಕರರ 11 ತಿಂಗಳ ಸಂಬಳ ರೂಪದಲ್ಲಿ ನೀಡಬೇಕಾದ ಮೊತ್ತ ₹1.25 ಕೋಟಿ. ಈಚೆಗೆ ಮೂರು ತಿಂಗಳ ಅನುದಾನ ರೂಪದಲ್ಲಿ ₹47 ಲಕ್ಷ ಬಂದಿದ್ದರಲ್ಲೇ ಹೊಂದಾಣಿಕೆ ಮಾಡಿ ಈ ಸಿಬ್ಬಂದಿಯ ಒಂದು ತಿಂಗಳ ಸಂಬಳ ₹18 ಲಕ್ಷಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ 11 ತಿಂಗಳ ಬಾಕಿಯಲ್ಲಿ ಈ ಹಿಂದಿನ ಕುಲಪತಿ ಅವರ ಅವಧಿಯಲ್ಲಿನ 4 ತಿಂಗಳ ಬಾಕಿಯೂ ಸೇರಿದೆ. ಸದ್ಯ ಮೂರು ತಿಂಗಳಿಂದ ಸಂಬಳ ಕೊಟ್ಟಿಲ್ಲದಿರುವುದು ನಿಜ. ಸರ್ಕಾರ ಅನುದಾನ ನೀಡಿದರೆ ಮಾತ್ರ ಉಳಿದ ಸಂಬಳ ನೀಡಲು ಸಾಧ್ಯ. ಸರ್ಕಾರ ಶೀಘ್ರ ಸ್ಪಂದಿಸುವ ವಿಶ್ವಾಸ ಇದೆ’ ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.