ಹಂಪಿ (ವಿಜಯನಗರ): ಇತ್ತ ಮಧುರ ಕಂಠದಲ್ಲಿ ವಕ್ರತುಂಡನಿಗೆ ಪ್ರಾರ್ಥನೆ ಸಲ್ಲುತ್ತಿತ್ತು, ಅತ್ತ ಹೆಗಲ ಮೇಲೆ ಕೀ ಬೋರ್ಡ್ ನೇತು ಹಾಕಿಕೊಂಡು 'ನಮಸ್ಕಾರ ಹಂಪಿ' ಎನ್ನುವ ಧ್ವನಿ ಬರುತ್ತಿದ್ದಂತೆ ವೇದಿಕೆಯತ್ತ ದೃಷ್ಟಿ ನೆಟ್ಟಿದ್ದ ಜನಸಾಗರವೇ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ ಜನ್ಯ ಕಂಡು ಕೇಕೆ, ಶಿಳ್ಳೆಗಳಿಂದ ಸ್ವಾಗತಿಸಿತು. ಶನಿವಾರ ಮಧ್ಯರಾತ್ರಿ ಹಂಪಿ ಉತ್ಸವಕ್ಕೆ ಈ ರೀತಿಯಲ್ಲಿ ‘ಎ.ಜೆ’ ಸಂಗೀತ ತಂಡ ಭರ್ಜರಿ ಪ್ರವೇಶ ನೀಡಿತು.
ಜನ್ಯ ಅವರು ಕೀಬೋರ್ಡ್ ನುಡಿಸುತ್ತಲೇ ಇದ್ದಾಗ ಹತ್ತು ನಿಮಿಷ ವಿವಿಧ ಗೀತೆಗಳನ್ನು ಹಾಡುತ್ತಾ ಬಂದ ಹಲವು ಹೊಸ ಗಾಯಕರು, ನುರಿತ ವಾದಕರ ತಂಡವನ್ನು ಸ್ವಾಗತಿಸಲಾಯಿತು. ಇದೊಂದು ಹೊಸ ಅನುಭವವಾಗಿತ್ತು. ಇಡೀ ತಂಡ ಸಮಾಗಮಗೊಂಡು ಗಾಯಕ ಜಸ್ಕರಣ್ ಅವರು, 'ಜಗವೇ ನೀನು ಗೆಳತಿಯೇ' ಗೀತೆ ಹಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಅರ್ಜುನ್ ಜನ್ಯ ಅವರು ಜನರೇ ಧನಿಗೂಡಿಸುಂತೆ ಮಾಡಿ ಒಂದು ನಿಮಿಷದ ಆಡಿಷನ್ ನಡೆಸಿಯೇ ಬಿಟ್ಟರು.
'ನೀ ಸಿಗೋವರೆಗೂ, ನಗೋವರೆಗೂ ಕಾದಿರುವೆ ಗೆಳತಿಯೇ' ಎಂದು ಯುಗಳ ಗೀತೆ ಶುರು ಮಾಡಿದಾಗ ಯುವಕರು, ಯುವತಿಯರು ಹುಚ್ಚೆದ್ದು ಕುಣಿದರು. ಜೈ ಜೈಜೈ ಭಜರಂಗಿ ಹಾಡುತ್ತಾ ಡ್ರಮ್ಸ್ ಬಡಿದು ಪ್ಷೇಕ್ಷರಕ ಎದೆಬಡಿತ ಹೆಚ್ಚಿಸಿದರು. ಹಿಂದೆ ಗದೆ ಹಿಡಿದು ಹೆಜ್ಜೆ ಹಾಕಿದ ನೃತ್ಯಗಾರರು ಮೆರುಗು ನೀಡಿದರು.
'ಹೇ ಹುಡುಗಿ ಯಾಕಿಂಗ್ ಮಾಡ್ತಿ, ವರ್ಷಾಯ್ತು ಸಿಗುಲ್ಲಿ ಕೈಗೆ' ಗೀತೆಯಲ್ಲಿ ಮೋಡಿ ಮಾಡಿದ ಜನ್ಯ ಅವರು ಎಲ್ಲರೂ ಎದ್ದುನಿಂತ ಕುಣಿಯುವಂತೆ ಮಾಡಿಬಿಟ್ಟರು.
ಮಂಜು ಡ್ರಮ್ಸ್ ಸೆಟ್ ವಾದನದಲ್ಲಿ 'ವ್ಹಾ, ವ್ಹಾವ್ಹಾ ಕೈನಾಗೆ ಮೈ ಕೊಟ್ಟರೆ, ನಾನ್ ಸ್ಟಾಪ್ ಭಾಷಣ' ಗೀತೆ ಹಾಡುತ್ತಾ ಜನ್ಯ ಅವರು ಪ್ರೇಕ್ಷಕರ ಗ್ಯಾಲರಿಗೆ ಇಳಿದು ಅಭಿಮಾನಿಗಳೊಂದಿಗೆ ಈ ವೇಳೆ ಮೊಬೈಲ್ ಹಿಡಿದಿದ್ದ ಯುವಕರು ಅವರ ಫೋಟೋಕ್ಕಾಗಿ ಮುಗಿಬಿದ್ದರು. ಒಂದೇ ಮಳೆ ಬಿಲ್ಲು ಗೀತೆಯಲ್ಲಿ ಸಹಸ್ರಾರು ಮೊಬೈಲ್ ಟಾರ್ಚ್ ಬೆಳಗಿಸಿದ್ದು ನಕ್ಷತ್ರದ ಮಳೆ ಸುರಿಸಿದಂತಿತ್ತು. ಕೀ ಬೋರ್ಡ್ ನಲ್ಲಿ ಪಿಸು ಮಾತಿಗೆ, ನೀರಿಗೆ ಬಾರೆ ಚೆಲುವೆ ಹಾಡು ಹಾಡು ನುಡಿಸಿ, ಕುಣಿದು ಸುಸ್ತಾಗಿದ್ದ ಪ್ರೇಕ್ಷಕರ ಮನತಣಿಸಿದರು.
ಆರು ಹಾಡು ಹಾಡಿದ ಬಳಿಕ ಗ್ಯಾಲರಿಯಲ್ಲಿದ್ದ ಜನ್ಯ ಅವರು ಯುವತಿಯನ್ನು ವೇದಿಕೆ ಕರೆಯಿಸಿಕೊಂಡು ಸೆಲ್ಫಿ ಫೋಟೋಗೆ ಅವಕಾಶ ಕೊಟ್ಟರು.
ಮಾಸ್ಟರ್ ಆನಂದ ರಚಿಸಿದ 'ನನ್ನಲ್ಲೊಂದು, ನಿನ್ನಲ್ಲೊಂದು , ಏನೊಂದು ಗುಟ್ಟು ಇದೆ' ಸಾಹಿತ್ಯವನ್ನು ಓದಿ ಹೇಳಿದರು, ಅದಕ್ಕೆ ಸ್ಥಳದಲ್ಲೇ ಜನ್ಯ ಅವರು ರಾಗ ಸಂಯೋಜಿಸಿದ ತಂಡದೊಟ್ಟಿಗೆ ಹಾಡಿಸಿದ್ದಕ್ಕೆ ಸಭಿಕರು ಹುಬ್ಬೇರಿಸಿದರು. 'ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ' 'ಬೊಂಬೆ ಹೇಳತೈತಿ' ಗೀತೆಗಳ ಮೂಲಕ ನಟ ಪುನೀತ್ ಅವರನ್ನು ಸ್ಮರಿಸುವುದನ್ನು ಮರೆಯಲಿಲ್ಲ.
'ಯಾಕೋ ಹುಡುಗ ಮೈಯಾಗ ಹೆಂಗೈತಿ' ಗೀತೆಗೆ ಪ್ರೇಕ್ಷಕರು ಕೋರಸ್ ಹಾಡಿದರು. ಜಸ್ಕರಣ್ ಅವರ ಕಂಠಸಿರಿಯಲ್ಲಿ ಹೊರಹೊಮ್ಮಿದ 'ಜೀವದ ಗೆಳತಿಯೇ' ಹಾಡು ಚಳಿ ಮರೆಸಿತು. ಸರಿಗಮಪ ಖ್ಯಾತಿಯ ಕೀರ್ತನ್ ಹೊಳ್ಳ, ಗಾಯಕ ಸುನೀಲ್ ಸೇರಿದಂತೆ ಹಲವು ಗಾಯಕರು ಹಂಪಿ ಉತ್ಸವ ಮುಖ್ಯ ವೇದಿಕೆಯಲ್ಲಿ ತಮ್ಮ ಪ್ರತಿಭೆ ಪ್ರಸ್ತುತಪಡಿಸಿದರು.
ಬೀಟ್ ಗುರು ತಂಡ:
ಬೀಟ್ ಗುರು ತಂಡ ಚರ್ಮವಾಧ್ಯಗಳನ್ನು ನುಡಿಸಲು ಆರಂಭಿಸಿದಾಗ ರಾತ್ರಿ 12 ಗಂಟೆ ಆಗಿತ್ತು. ವೇದಿಕೆಯಲ್ಲಿ ಕೊಳಲು, ಚರ್ಮವಾಧ್ಯಗಳ ಸದ್ದು ಕೇಳಿ ಬರುತ್ತಲೇ ಪ್ರೇಕ್ಷಕರು ಎದೆಬಡಿತ ನಿಧಾನವಾಗಿ ಹೆಚ್ಚಾಯಿತು.ತಂಡದ ನಾಯಕ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡಿಗೆ ಕೊಳಲು, ವಾಧ್ಯಗಳ ವಾದನ ಚಪ್ಪಾಳೆಯ ಹರ್ಷೋದ್ಘಾರಕ್ಕೆ ಸಾಕ್ಷಿಯಾಯಿತು.
ಕಂಚಿನ ಕಂಠದ ನಟ ವಸಿಷ್ಠ ಸಿಂಹ ಅವರ ಡೈಲಾಗ್ ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲಿಸಿತು. ಸರಿಗಮಪ ಗಾಯಕ ಬಾಳು ಬೆಳಗುಂದಿ, 'ಲಂಗದಾವಣ್ಯಗ ಚಂದ ಕಾಣ್ತಿ ಲಾವಣ್ಯ, ಪೋನ್ ನಂಬರ ಕೊಡು ಕಣೆ' ಜನಪದ ಶೈಲಿಯ ಗಾಯನಕ್ಕೆ ಯುವಜನತೆ ಸ್ಟೆಪ್ ಹಾಕಿದರು.
ನಟಿ ನಿಖಿತಾ ಸ್ವಾಮಿ, ರಮೇಶ್ ಅವರ ತಂಡ, ‘ಬಾಳ ಬಂಗಾರ ನೀನು, ಹಣೆಯ ಸಿಂಗಾರ ನೀನು’ ಹಾಡಿಗೆ ಮನಮೋಹಕ ನೃತ್ಯ, ಶರಣ್ಯ ಶೆಟ್ಟಿ ತಂಡದ ನೃತ್ಯಗಳು ಮಧ್ಯರಾತ್ರಿಯ ಚಳಿ ಮರೆಸಿತು. ಕಾರ್ಯಕ್ರಮ ಕೊನೆಗೊಳ್ಳುವಾಗ ಮಧ್ಯರಾತ್ರಿ 2 ಗಂಟೆಯಾಗಿತ್ತು. ಆಗಲೂ ಜನಸಾಗರ ಕದಲದೆ ಉಳಿದಿತ್ತು.
ವಾಸುಕಿ ಗಾಯನಕ್ಕೆ ವೈಭವದ ಕುಣಿತ
ಹಂಪಿ (ವಿಜಯನಗರ) : ಹಂಪಿ ಉತ್ಸವದ ಎಂ.ಪಿ.ಪ್ರಕಾಶ್ ಮುಖ್ಯ ವೇದಿಕೆಯಲ್ಲಿ ಶನಿವಾರ ರಾತ್ರಿ ‘ಕಾಗದದ ದೋಣಿಯಲಿ’ ಹಾಡಿನ ಖ್ಯಾತಿಯ ಗಾಯಕ ವಾಸುಕಿ ವೈಭವ್ ಅವರ ಸಂಗೀತ ಲಹರಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದರು.
ಹಲವು ಹಾಡುಗಳಿಗೆ ದನಿಯಾದ ವಾಸುಕಿ ಮತ್ತು ಅವರ ತಂಡದ ಸಂಗೀತ ಲಹರಿಗೆ ನೆರೆದಿದ್ದ ಪ್ರೇಕ್ಷಕರು ಅಲುಗಾಡಲಿಲ್ಲ.
ಮೋಡಿ ಮಾಡಿದ ಬೆಳಗುಂದಿ
ಉತ್ತರ ಕರ್ನಾಟಕದ ಗ್ರಾಮೀಣ ಗಾಯಕ ಬಾಳು ಬೆಳಗುಂದಿ ಪ್ರಸ್ತುತ ಪಡಿಸಿದ ವಿಕಟ ಗೀತೆಗಳಿಗೆ ನೆರದಿದ್ದ ಜನ ಕುಣಿದು ಕುಪ್ಪಳಿಸಿದರು.
ಆರಂಭದಲ್ಲಿ ‘ಹುಟ್ಟಿದ ಊರಿಗೆ ಹ್ವಾದರೇ ಕಟ್ಟಿ ಬಡಿತಾರೆ’, ‘ಲಾವಣ್ಯ ಲಾವಣ್ಯ’, ‘ಕುಣಿತಾಳೋ ಕುಣಿತಾಳೋ, ಜಿಗಿತಾಳೋ ಜಿಂಕೆ ಜಗಿದಾಗೆ ಜಿಗಿತಾಳೋ’ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಉತ್ತರ ಕರ್ನಾಟಕ ಗಾಯಕಿ ಮಾಲಾಶ್ರೀ ಅವರು ಬಾಳು ಬೆಳಗುಂದಿಗೆ ಸಾಥ್ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.