ADVERTISEMENT

ಹಂಪಿ ಉತ್ಸವ: ಮುಖ್ಯ ವೇದಿಕೆ–ಸ್ಥಳೀಯರ ಕಡೆಗಣನೆ ಸಲ್ಲ; ಕವಿತಾ ಎಸ್.ಮನ್ನಿಕೇರಿ

ಹಂಪಿ ಉತ್ಸವ: ಅರ್ಹ ಸ್ಥಳೀಯ ಕಲಾವಿದರಿಗೂ ಸಮಾನ ಅವಕಾಶ–ಡಿ.ಸಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 2:43 IST
Last Updated 20 ಜನವರಿ 2026, 2:43 IST
<div class="paragraphs"><p>ಹಂಪಿ ಉತ್ಸವ–2026 ಲಾಂಛನ</p></div>

ಹಂಪಿ ಉತ್ಸವ–2026 ಲಾಂಛನ

   

ಹೊಸಪೇಟೆ (ವಿಜಯನಗರ): ಹಂಪಿ ಉತ್ಸವ ಫೆ.13ರಿಂದ 15ರವರೆಗೆ ನಡೆಯುತ್ತಿದ್ದು, ಸಂಗೀತ, ಸಾಂಸ್ಕೃತಿಕ, ಕಲೆ, ನಾಟಕ ಹೀಗೆ ವಿವಿಧ ರೀತಿಯ ಕಲಾವಿದರಿಗೆ ಕಾರ್ಯಕ್ರಮಗಳಲ್ಲಿ ಸಮಾನ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಸೋಮವಾರ ಸ್ಥಳೀಯ ಕಲಾವಿರು ಮತ್ತು ಸಂಘ, ಸಂಸ್ಥೆಗಳೊಂದಿಗೆ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಅವರು ಈ ಭರವಸೆ ನೀಡಿದರು. ಉತ್ಸವವನ್ನು ಕಳೆದ ಬಾರಿಗಿಂತಲೂ ವಿಶೇಷ ಮತ್ತು ವಿನೂತನವಾಗಿ ಆಚರಿಸಲು ನಿರ್ಧರಿಸಲಾಗಿದೆ. ಅದರಂತೆ ಸಕಲ ಸಿದ್ದತೆ ಕೈಗೊಳ್ಳಲಾಗುತ್ತಿದೆ ಎಂದರು. ಮುಖ್ಯ ವೇದಿಕೆಯಲ್ಲಿ ಸ್ಥಳೀಯ ಕಲಾವಿದರ ಕಡೆಗಣನೆಗೆ ತೀವ್ರ ಬೇಸರ ವ್ಯಕ್ತಪಡಿಸಿದ ರಂಗಭೂಮಿ ಕಲಾವಿದೆ ಮಂಜಮ್ಮ ಜೋಗತಿ ಅವರಿಗೆ ಡಿ.ಸಿ ಅವರು ಈ ಭರವಸೆ ನೀಡಿದರು.

ADVERTISEMENT

‘ಹಂಪಿ ಉತ್ಸವ ಎಂದರೆ ಕಲಾವಿದರ ದಂಡೇ ಸೇರುತ್ತದೆ. ಸ್ಥಳೀಯ ಕಲಾವಿದರನ್ನು ಸಮಗ್ರವಾಗಿ ಪರಿಶೀಲಿಸಿ ಅರ್ಹ ಮತ್ತು ನೈಜ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ಇದಕ್ಕೆ ತಮ್ಮೆಲ್ಲರ ಸಹಕಾರವೂ ಅತ್ಯಗತ್ಯ’ ಎಂದರು.

ಮಂಜಮ್ಮ ಜೋಗತಿ ಮಾತನಾಡಿ, ಈ ಹಿಂದೆ ಹಣ, ಮೂಲಭೂತ ಸೌಲಭ್ಯಗಳು ಕಡಿಮೆ, ಆದರೆ ಉತ್ಸವ ಅಚ್ಚುಕಟ್ಟಾಗಿ ನಡೆಯುತ್ತಿತ್ತು, ಇಂದು ಎಲ್ಲವೂ ಇದ್ದರೂ ಕಟ್ಟುನಿಟ್ಟಾಗಿ ಆಯೋಜನೆ ಆಗುತ್ತಿಲ್ಲ. ಸಿನಿಮಾ ತಾರೆಯರಿಗೆ, ಖ್ಯಾತ ಕಲಾವಿದರಿಗೆ ಮಾತ್ರ ಮುಖ್ಯ ವೇದಿಕೆಗೆ ಅವಕಾಶ ನೀಡಲಾಗುತ್ತದೆ. ನಮ್ಮಂತಹ ಸ್ಥಳೀಯ ಕಲಾವಿದರಿಗೆ ಕಡೆಗಣಿಸಲಾಗುತ್ತದೆ. ಈ ರೀತಿ ಭೇದ-ಭಾವ ಧೋರಣೆ ಅನುಸರಿಸದೇ ಎಲ್ಲರನ್ನೂ ಸಮಾನತೆಯಿಂದ ಕಾಣುವುದರ ಜೊತೆಗೆ ಸಮಾನ ಅವಕಾಶ ಕಲ್ಪಿಸಬೇಕು’ ಎಂದರು.

ಮುಂಗಡ ಹಣ ಇಲ್ಲ: ಕಲಾವಿದರಿಗೆ ಮುಂಗಡವಾಗಿ ಒಂದಿಷ್ಟು ಹಣ ನೀಡಬೇಕು ಎಂದು ಒತ್ತಾಯಿಸಿದ ಒಬ್ಬ ಕಲಾವಿದರಿಗೆ ಉತ್ತರ ನೀಡಿದ ಜಿಲ್ಲಾಧಿಕಾರಿ ಕವಿತಾ, ಉತ್ಸವಕ್ಕಾಗಿ ಸರ್ಕಾರಕ್ಕೆ ₹ 22 ಕೋಟಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ಅನುದಾನ ಕೊರತೆಯಿದೆ. ಮುಂಗಡ ಹಣ ಸಂದಾಯ ಅಸಾಧ್ಯ, ಸರ್ಕಾರದಿಂದ ಹಣ ಬಿಡುಗಡೆಯಾದ ನಂತರ ಸಂಪೂರ್ಣವಾಗಿ ಏಕ ಕಂತಿನಲ್ಲಿ ಸಂಭಾವನೆ ಪಾವತಿಸಲಾಗುವುದು ಎಂದರು.

ತೊಗಲು ಗೊಂಬೆಯಾಟ, ಸೂತ್ರ ಗೊಂಬೆಯಾಟ ಮೊದಲಾದ ಕಲೆಗಳಿಗೆ ವೇದಿಕೆ ಕಲ್ಪಿಸಬೇಕು, ಸಾವಯವ ಕೃಷಿ, ದವಸ ಧಾನ್ಯ ಪ್ರದರ್ಶನ ಮಾಡಬೇಕು. ಈ ಕುರಿತು ವಿಶೇಷ ಉಪನ್ಯಾಸ ಆಯೋಜಿಸಬೇಕು ಎಂಬ ಸಲಹೆಯೂ ಕೇಳಿಬಂತು.

ಸರ್ಕಾರದ ನಿಯಮಾನುಸಾರ, ಪರಿಮಿತಿಯೊಳಗೆ ಉತ್ಸವ ನಡೆಸಲಾಗುವುದು. ಆದರೂ ಸಾಧ್ಯವಾದಷ್ಟು ತಮ್ಮ ಸಲಹೆ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಮತ್ತು ಸಕಲ ರೀತಿಯಲ್ಲೂ ಉತ್ತಮವಾಗಿ ಆಯೋಜಿಸಲಾಗುವುದು ಎಂದು ಡಿ.ಸಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ ಇತರರು ಇದ್ದರು.

ಹೊಸಪೇಟೆಯಲ್ಲಿ ಸೋಮವಾರ ಹಂಪಿ ಉತ್ಸವ ಕುರಿತಂತೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ಕಲಾವಿದರು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು  –ಪ್ರಜಾವಾಣಿ ಚಿತ್ರ

‘ಅಂಗವಿಕಲರ ಕಷ್ಟ ಅರ್ಥಮಾಡಿಕೊಳ್ಳಿ

’ ಹಂಪಿ ಉತ್ಸವದಲ್ಲಿ ಅಂಧ ವಿಕಲಾಂಗ ವಿಶೇಷ ಚೇತನರಿಗೆ ಪಾರ್ಕಿಂಗ್ ವ್ಯವಸ್ಥೆಯೇ ಕಗ್ಗಂಟು. ಮುಖ್ಯ ವೇದಿಕೆಗೂ ಪಾರ್ಕಿಂಗ್ ಸ್ಥಳಕ್ಕೂ ದೂರ ಇರುತ್ತದೆ. ಸಾರಿಗೆ ಸೌಲಭ್ಯ ಪಾಸ್ ವ್ಯವಸ್ಥೆಯಿಲ್ಲದೇ ಮುಖ್ಯ ವೇದಿಕೆ ಬಳಿ ತೆರಳಲು ಸಾಧ್ಯವಾಗುತ್ತಿಲ್ಲ. ಇದನ್ನು ಜಿಲ್ಲಾಡಳಿತ ಗಮನಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬ ಸಲಹೆ ಸಭೆಯಲ್ಲಿ ಕೇಳಿಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.