
ಹರಪನಹಳ್ಳಿ: ನಗರದ ಸೌಂದರ್ಯಕ್ಕೆ ಮೆರುಗು ನೀಡುವ ಗೋಸಾವಿ ಗುಡ್ಡದ ಆವರಣ ಹಾಗೂ ಐತಿಹಾಸಿಕ ಪರ್ವತ ರಾಮೇಶ್ವರ ದೇವಸ್ಥಾನ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಈಗಿನ ಪಹಣೀ ಪ್ರಕಾರ ಒಟ್ಟು 17.44 ಎಕರೆ ವಿಸ್ತೀರ್ಣ ಹೊಂದಿರುವ ಗೋಸಾವಿ ಗುಡ್ಡ. ಇದರಲ್ಲಿ ಕರ್ನಾಟಕ ಸರ್ಕಾರ ನ್ಯಾಯಾಂಗ ಇಲಾಖೆಯ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ 4.40 ಎಕರೆ, ಗೌಳೇರ ಯಲ್ಲಪ್ಪ ಹೆಸರಿನಲ್ಲಿ 1.50 ಎಕರೆ ಹಾಗೂ ಕಲ್ಲುಮಟ್ಟಿ 8.79 ಎಕರೆ ಜಮೀನು ನಿಗದಿಪಡಿಸಲಾಗಿದೆ.
ಹಸಿರು ಗಿಡಮರಗಳಿಂದ ಕಂಗೊಳಿಸುತ್ತಿರುವ ಗೋಸಾವಿ ಗುಡ್ಡ ಪ್ರಾಕೃತಿಕ ಸೌಂದರ್ಯದಿಂದ ಆಕರ್ಷಿಸುತ್ತಿದೆ. ಗುಡ್ಡ ಏರಿದರೆ ನಗರ ಪ್ರದೇಶವನ್ನು ವೀಕ್ಷಿಸಬಹುದು. ಕಾಲ್ನಡಿಗೆಗೆ, ವ್ಯಾಯಾಮಕ್ಕೆ ಉತ್ತಮ ವಾತಾವರಣ ಹೊಂದಿದೆ. ಗೋಸಾವಿ ಗುಡ್ಡದಲ್ಲಿ ಹಿಂದೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ಏಕಾಗ್ರತೆ ವ್ಯಾಸಂಗಕ್ಕೆ ಅನುಕೂಲವಾಗಿತ್ತು, ಮೇಲ್ಭಾಗದಲ್ಲಿ ಉದ್ಯಾನ ನಿರ್ಮಿಸಿ ಮಕ್ಕಳಿಗೆ ಆಟಿಕೆ ಸಾಮಾಗ್ರಿ ಅಳವಡಿಸಿದ್ದರು. ನಿತ್ಯವೂ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದರು. ಆದರೆ ಈಗ ಅದ್ಯಾವುದು ನಡೆಯದೇ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಪರ್ವತ ರಾಮೇಶ್ವರ ಆವರಣದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ದೇವಸ್ಥಾನಕ್ಕೆ ರಕ್ಷಣೆಯಿಲ್ಲದೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೆಳಭಾಗದಲ್ಲಿ ಕೆಲವರು ಮಣ್ಣು ಅಗೆದು ಗುಡ್ಡವನ್ನು ಸವೆಸಲು ಆರಂಭಿಸಿದ್ದಾರೆ. ಗುಡ್ಡ ಏರುತ್ತಿದ್ದ ಮೆಟ್ಟಿಲುಗಳನ್ನು ಹಾಳು ಮಾಡಲಾಗಿದೆ. ದೊಡ್ಡ ಮರಗಳನ್ನು ಕಡಿದು ಹಾಕಿದ್ದಾರೆ. ಗೋಸಾವಿ ಗುಡ್ದದ ಹಿಂಭಾಗದಿಂದ ಹಾಲವರ್ತಿಗೆ ಹೋಗುವ ಮಾರ್ಗದ ಮೆಟ್ಟಿಲುಗಳನ್ನು ಭೂಗಳ್ಳರು ಕಿತ್ತು ಹಾಕಿದ್ದಾರೆ.
ಗೋಸಾವಿ ಗುಡ್ಡದಲ್ಲಿ ಅಕ್ರಮವಾಗಿ ಮಣ್ಣು ಅಗೆದು ಜಮೀನು ಮಾಡಿಕೊಳ್ಳಲು ಹೊರಟಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು ಗೋಸಾವಿ ಗುಡ್ಡದ ಸೌಂಧರ್ಯ ಉಳಿಸುವ ನಿಟ್ಟಿನಲ್ಲಿ ಅಭಿವೃದ್ದಿ ಕಾಮಗಾರಿ ರೂಪಿಸಬೇಕುಎಚ್.ಎ.ಸುರೇಂದ್ರಬಾಬು ನಾಗರಿಕ ಹರಪನಹಳ್ಳಿ
ಗೋಸಾವಿ ಗುಡ್ಡದ ಸೌಂದರ್ಯಕ್ಕೆ ಧಕ್ಕೆ ತರುವ ಮಣ್ಣು ಅಗೆಯುವವರ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಒಂದು ವೇಳೆ ಸಾರ್ವಜನಿಕರು ಖಚಿತ ಮಾಹಿತಿ ಕೊಟ್ಟರೆ ಸೂಕ್ತ ಕ್ರಮ ಜರುಗಿಸಲಾಗುವುದುಬಿ.ವಿ.ಗಿರೀಶ್ ಬಾಬು ತಹಶೀಲ್ದಾರ ಹರಪನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.