ADVERTISEMENT

ಎಸ್‌ಸಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ನಡೆಯುತ್ತಿದ್ದ ಧರಣಿ ಮೊಟಕು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 16:15 IST
Last Updated 17 ಏಪ್ರಿಲ್ 2022, 16:15 IST
ಪರಿಶಿಷ್ಟ ಜಾತಿ/ಪಂಗಡದವರ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ನಡೆಸುತ್ತಿದ್ದ ಧರಣಿ
ಪರಿಶಿಷ್ಟ ಜಾತಿ/ಪಂಗಡದವರ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ನಡೆಸುತ್ತಿದ್ದ ಧರಣಿ    

ಹೊಸಪೇಟೆ (ವಿಜಯನಗರ): ಪರಿಶಿಷ್ಟ ಜಾತಿ/ಪಂಗಡದವರ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಒಂದು ವಾರದಿಂದ ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಭಾನುವಾರ ಸಂಜೆ ಕೊನೆಗೊಳಿಸಿತು.

ಸಾರಿಗೆ ಸಚಿವ ಬಿ. ಶ್ರೀರಾಮುಲು, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಮಧ್ಯಾಹ್ನ ಧರಣಿ ಸ್ಥಳಕ್ಕೆ ಬಂದು, ಸರ್ಕಾರದ ಮಟ್ಟದಲ್ಲಿ ಮೀಸಲಾತಿ ಹೆಚ್ಚಿಸಲು ಎಲ್ಲ ರೀತಿಯ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು. ಬಳಿಕ ಧರಣಿ ಹಿಂಪಡೆದರು.
ಇದಕ್ಕೂ ಮುನ್ನ ಧರಣಿ ನಿರತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಬೇಕೆಂದು ಪಟ್ಟು ಹಿಡಿದರು. ವಿಷಯ ತಿಳಿದು ಇಬ್ಬರು ಸಚಿವರು ಸ್ಥಳಕ್ಕೆ ಬಂದು ಮನವೊಲಿಸಿದರು.

‘ನಾನು ವಾಲ್ಮೀಕಿ ಸಮಾಜದಲ್ಲೇ ಹುಟ್ಟಿರುವೆ. ಸಮುದಾಯದ ಏಳಿಗೆಗಾಗಿ ಪ್ರಾಣ ಮೀಸಲಿಡುತ್ತೇನೆ. ಶೇ 7.5ಕ್ಕೆ ಮೀಸಲಾತಿ ಹೆಚ್ಚಿಸಲು ಎಲ್ಲ ರೀತಿಯಿಂದ ಶ್ರಮಿಸುತ್ತೇನೆ. ಸರ್ಕಾರಕ್ಕೆ ಇನ್ನೂ ಒಂದುವರೆ ವರ್ಷ ಇದೆ. ನನ್ನ ಸಮುದಾಯಕ್ಕೆ ಮೀಸಲಾತಿ ಕೊಟ್ಟೇ ತೀರುತ್ತೇನೆ. ಸುಭಾಷ್ ಅಡಿಯವರ ವರದಿ ಹಿಂಪಡೆದು ನಾಗಮೋಹನ್ ದಾಸ ವರದಿ ಜಾರಿಗೊಳಿಸಲು ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾತನಾಡಿ, ಅಖಂಡ ಬಳ್ಳಾರಿ ಜಿಲ್ಲೆಯ ಜನರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಮೀಸಲಾತಿ ವಿಚಾರ ಕೇವಲ ಹೊಸಪೇಟೆಗೆ ಸಂಬಂಧಿಸಿಲ್ಲ. ರಾಜ್ಯದ ಸಮಸ್ಯೆಯಾಗಿದ್ದು, ಶ್ರೀರಾಮುಲು, ನಾನು ಮೀಸಲಾತಿ ಕೊಡಿಸಲು ನೀಡಿರುವ ಭರವಸೆ, ಮಾತನ್ನು ನಂಬಬೇಕು ಎಂದು ಕೋರಿದರು.

ಹೋರಾಟ ಸಮಿತಿ ಸಂಚಾಲಕರಾದ ಜಂಬಯ್ಯ ನಾಯಕ, ಎಂ.ಸಿ.ವೀರಸ್ವಾಮಿ, ಅನಂತ ನಾಯ್ಕ, ಎಂ.ಜಿ‌.ಜೋಗಯ್ಯ, ಕಿಚಡಿ ಶ್ರೀನಿವಾಸ್, ಪೂಜಾರಿ ದುರುಗಪ್ಪ, ಎಂ. ಜಂಬಯ್ಯ ನಾಯಕ, ಗುಜ್ಜಲ ರಘು, ಗೋಸಲ ಭರಮಪ್ಪ, ಸಂಪನ್ನ ಎಂ, ಗುಜ್ಜಲ್ ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.