ADVERTISEMENT

ಹೊಸಪೇಟೆ: ಉತ್ಸವ ಮೂರ್ತಿ ಬದಲಿಗೆ ಎಲ್ಲಾ ಧರ್ಮಗಳ ಗ್ರಂಥಗಳಿಟ್ಟು ರಥೋತ್ಸವ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 14:34 IST
Last Updated 10 ಮಾರ್ಚ್ 2025, 14:34 IST
   

ಹೊಸಪೇಟೆ (ವಿಜಯನಗರ): ಎಲ್ಲೆಡೆ ನಡೆಯುವ ರಥೋತ್ಸವಗಳಿಗೆ ಭಿನ್ನವಾಗಿ, ಜಗತ್ತಿನ ಎಲ್ಲಾ ಧರ್ಮಗಳ ಧರ್ಮಗ್ರಂಥಗಳನ್ನು ಉತ್ಸವ ಮೂರ್ತಿ ಇಡುವ ಸ್ಥಳದಲ್ಲಿ ರಥದೊಳಗಿಟ್ಟು, ಸೋಮವಾರ ಸಂಜೆ ಇಲ್ಲಿನ ಕೊಟ್ಟೂರುಸ್ವಾಮಿ ಮಠದ ಮುಂಭಾಗದ ಮೇನ್‌ ಬಜಾರ್‌ನಲ್ಲಿ ರಥ ಎಳೆಯಲಾಯಿತು.

ಕೊಟ್ಟೂರು ಸ್ವಾಮಿ ಮಠದ ಈ ಹಿಂದಿನ ಪೀಠಾಧಿಪತಿಗಳಾಗಿದ್ದ ಸಂಗನಬಸವ ಸ್ವಾಮೀಜಿ ಅವರು ಎಂಟು ವರ್ಷಗಳ ಹಿಂದೆ ಸರ್ವಧರ್ಮ ರಥೋತ್ಸವವನ್ನು ಆರಂಭಿಸುವ ಮೂಲಕ ಮಠವು ಯಾವುದೇ ಜಾತಿ, ಧರ್ಮ, ಜನಾಂಗದ ಸಮುದಾಯಗಳಿಗೆ ಸೀಮಿತವಾಗಿಲ್ಲ, ಮಠವೆಂದರೆ ಸರ್ವ ಜನಾಂಗದ ಶಾಂತಿಯ ತಾಣ ಎಂಬ ಸಂದೇಶವನ್ನು ಸಾರಿದ್ದರು. ಮೂರು ವರ್ಷಗಳ ಹಿಂದೆ ಅವರು ಲಿಂಗೈಕ್ಯರಾದರೂ ಅವರು ಹುಟ್ಟುಹಾಕಿದ ಪರಂಪರೆಯನ್ನು ಇಂದಿನ ಗುರುಗಳಾದ ಕೊಟ್ಟೂರು ಬಸವಲಿಂಗ ಸ್ವಾಮೀಜಿ ಅವರು ಮುಂದುವರಿಸಿದ್ದಾರೆ.

ತೇರಿನಲ್ಲಿ ಭಗವದ್ಗೀತೆ, ಬೈಬಲ್, ಕುರಾನ್, ಸಿದ್ಧಾಂತ ಶಿಖಾಮಣಿ ಸೇರಿದಂತೆ ವಿಶ್ವದ ಎಲ್ಲಾ ಧರ್ಮದ ಗ್ರಂಥಗಳನ್ನು ಇಟ್ಟು ಮೊದಲಿಗೆ ಪೂಜಿಸಲಾಯಿತು. ಬಳಿಕ ಸಮಾಳ, ನಂದಿಕೋಲು, ಚಂಡೆ, ಮದ್ದಳೆ ಸೇರಿದಂತೆ ವಿವಿಧ ಬಗೆಯ ಮಂಗಳವಾದ್ಯಗಳೊಂದಿಗೆ ಮಠದ ಪರಂಪರೆಯಂತೆ ತೇರನ್ನು ಎಳೆಯಲಾಯಿತು. ಮೇನ್ ಬಜಾರಿಗೆ ಹೊಂದಿಕೊಂಡಿರುವ ಮಠದ ಹೆಬ್ಬಾಗಿಲಿನಿಂದ ಆರಂಭವಾದ ರಥೋತ್ಸವ ಪಾದಗಟ್ಟಿ ಆಂಜನೇಯ ದೇವಸ್ಥಾನದವರೆಗೆ ಸಾಗಿದ್ದು, ವಾಪಸ್‌ ಕೊಟ್ಟೂರು ಸ್ವಾಮಿ ಮಠವನ್ನು ಸೇರಿತು.

ADVERTISEMENT

ರಥೋತ್ಸವದಲ್ಲಿ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು, ಜೈನರು, ಬೌದ್ಧರು ಸೇರಿದಂತೆ ಹಲವಾರು ಸಮುದಾಯದವರು ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.