ಹೊಸಪೇಟೆ (ವಿಜಯನಗರ): ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಹೊಸಪೇಟೆ ನಗರ ಹಾಗೂ ಜಿಲ್ಲೆಯ ಇತರ ಪಟ್ಟಣ ಪ್ರದೇಶಗಳಲ್ಲಿ ಕಸ ಎತ್ತದೆ ರಸ್ತೆ ಬದಿಗಳೆಲ್ಲ ಗೊಬ್ಬರದ ಗುಂಡಿಗಳಂತಾಗಿವೆ.
ಮತ್ತೊಂದೆಡೆ ಬೀದಿ ದೀಪ, ನೀರು ಪೂರೈಕೆ ಬಿಟ್ಟು ಉಳಿದೆಲ್ಲ ಕೆಲಸಗಳೂ ಸ್ಥಗಿತಗೊಂಡಿದ್ದು, ಯಾವೊಬ್ಬ ಸಿಬ್ಬಂದಿಯೂ ಕಚೇರಿಯೊಳಗೆ ಹೋಗಿಲ್ಲ. ಹೀಗಾಗಿ ಸಾರ್ವಜನಿಕರ ಎಲ್ಲಾ ಕೆಲಸಗಳೂ ಮೂರು ದಿನಗಳಿಂದ ಸಂಪೂರ್ಣ ಸ್ಥಗಿತಗೊಂಡಿವೆ.
ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ಕೆಲಸ ಮತ್ತು ರಸ್ತೆ ಬದಿಗಳಲ್ಲಿನ ಕಸ ಎತ್ತುವ ಕೆಲಸ ಮಂಗಳವಾರ ಬೆಳಿಗ್ಗೆಯಿಂದಲೇ ಸ್ಥಗಿತಗೊಂಡಿತ್ತು. ಹೀಗಾಗಿ ಮನೆಗಳ ಒಳಗೂ, ಹೊರಗೂ ಕಸದ ರಾಶಿಯೇ ತುಂಬಿಕೊಂಡಿದ್ದು, ಇಡೀ ನಗರ ಗಬ್ಬೆದ್ದು ನಾರುವಂತಾಗಿದೆ. ತುಂತುರು ಮಳೆ ಸಹ ಆಗಾಗ ಸುರಿಯುತ್ತಿರುವುದರಿಂದ ಒಣ ಕಸಗಳು ಸಹ ಒದ್ದೆಯಾಗಿ ಗೊಬ್ಬರ ಗುಂಡಿಯಂತಹ ಸ್ಥಿತಿ ಹಲವೆಡೆ ನಿರ್ಮಾಣವಾಗಿದೆ.
ಬೀದಿನಾಯಿಗಳು ಕಸದಲ್ಲಿ ಸಿಗುವ ಆಹಾರ ಸೇವನೆಗಾಗಿ ಕಸವನ್ನು ಕೆದಕಿ ಹಾಕುತ್ತಿರುವ ದೃಶ್ಯ ಅಲ್ಲಲ್ಲಿ ಕಾಣಿಸುತ್ತಿದ್ದು, ಹೋಟೆಲ್‌ಗಳ ಮುಂಭಾಗದಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಕಸ ಕಟ್ಟಿ ಇಟ್ಟಿರುವುದೂ ಕಾಣಿಸಿದೆ.
ಸಂಜೆಯೊಳಗೆ ತೀರ್ಮಾನ?
‘ಗುರುವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯ ಪೌರನೌಕರರ ಸಂಘದ ಅಧ್ಯಕ್ಷ ಕೆ.ಪ್ರಭಾಕರ್ ಮತ್ತು ಇತರ ಮುಖಂಡರನ್ನು ಮಾತುಕತೆಗೆ ಕರೆದಿದ್ದಾರೆ. ಅಲ್ಲಿ ಒಂದು ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ. ಹೀಗಾಗಿ ಮುಷ್ಕರ ಮುಂದುವರಿಯುವ ಅಥವಾ ಕೈಬಿಡುವ ವಿಚಾರ ಸಂಜೆಯ ವೇಳೆಗೆ ಗೊತ್ತಾಗಬಹುದು. ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸಿದರೆ ತಕ್ಷಣ ಮುಷ್ಕರ ಕೊನೆಗೊಳಿಸುತ್ತೇವೆ ಮತ್ತು ಕಸ ಎತ್ತುವ ಕೆಲಸ ಸಹಿತ ಇತರ ಎಲ್ಲಾ ಕೆಲಸಗಳನ್ನು ತಕ್ಷಣದಿಂದಲೇ ಮಾಡಲಿದ್ದೇವೆ’ ಎಂದು ಸಂಘದ ಹೊಸಪೇಟೆ ಶಾಖೆಯ ಅಧ್ಯಕ್ಷ ಬಿ.ಎಂ.ನಾಗೇಂದ್ರ ವರ್ಮಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.